Saturday, December 6, 2008


14.07.2008

ಆರೋಗ್ಯವೃದ್ಧಿಗೆ ಪ್ರಾಣಿಕ್ ಹೀಲಿಂಗ್ ಸಹಕಾರಿ

ತುಮಕೂರು: ವ್ಯಕ್ತಿಯು ತನ್ನ ಸ್ವಾಸ್ಥ್ಯ ರಕ್ಷಣೆಯೊಂದಿಗೆ ತನ್ನಲ್ಲಡಗಿರುವ ಸಾಮರ್ಥ್ಯವನ್ನು ವೃದ್ಧಿಪಡಿಸಿಕೊಳ್ಳಲು ಸಹಾ ಪ್ರಾಣಿಕ್ ಹೀಲಿಂಗ್ ಚಿಕಿತ್ಸಾ ಪದ್ಧತಿಯು ಮಹತ್ವದ ಪರಿಣಾಮ ಬೀರುವುದು ಎಂದು ಮೈಸೂರಿನ ಯೋಗವಿದ್ಯಾ ಪ್ರಾಣ ಚಿಕಿತ್ಸಕಿ ಸಿ.ಆರ್.ಜಯಶ್ರೀ ಅವರು ಅಭಿಪ್ರಾಯಪಟ್ಟರು. ಅವರು ದಿನಾಂಕ: ೧೪.೦೭.೨೦೦೮ ರಂದು ತುಮಕೂರು ನಗರದ ಪ್ರಹ್ಲಾದರಾವ್ ಪಾರ್ಕ್‌ನಲ್ಲಿ ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆಯ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ “ಪ್ರಾಣಿಕ್ ಹೀಲಿಂಗ್ ಚಿಕಿತ್ಸಾ ಪದ್ಧತಿಯ ಬಗ್ಗೆ ವಿಶೇಷ ಉಪನ್ಯಾಸ ನೀಡುತ್ತಿದ್ದರು. ಪ್ರಾಣಿಕ್ ಹೀಲಿಂಗ್ ಇತರೆ ಯಾವುದೇ ವೈದ್ಯ ಪದ್ಧತಿಗೆ ವಿರುದ್ಧವಾದುದಲ್ಲ. ಇದು ಎಲ್ಲ ಚಿಕಿತ್ಸೆಗಳಿಗೂ ಪೂರಕವಾದುದು ಹಾಗೂ ಮುಂಜಾಗ್ರತಾ ಕ್ರಮವಾಗಿದೆ. ಯಾವುದೇ ಔಷಧಿಯಿಲ್ಲದೆ ರೋಗಗಳನ್ನು ಗುಣಪಡಿಸಿಕೊಳ್ಳಲು ಸಹಕಾರಿಯಾದ ಒಂದು ವಿಧಾನವಾಗಿ ಇದು ಜನಪ್ರಿಯವಾಗಿದೆ. ಇಂದು ಇದನ್ನು ಮನೆ-ಮನೆಗಳಲ್ಲೂ, ಹಿರಿಯರು-ಕಿರಿಯರು, ಸ್ತ್ರೀ-ಪುರುಷರೆಂಬ ಭೇದವಿಲ್ಲದಂತೆ ಎಲ್ಲರೂ ಕಲಿಯುವ ಅಗತ್ಯವಿದೆ. ಇದರ ಬಗ್ಗೆ ಅರಿವಿದ್ದರೆ ಅದೆಷ್ಟೋ ರೋಗಗಳಿಗೆ ಸುಲಭವಾಗಿ ನಿವಾರಣೆಯನ್ನು ಕಾಣಬಹುದು ಎಂದು ಉದಾಹರಣೆಗಳೊಂದಿಗೆ ಹೇಳಿದರು. ಮನುಷ್ಯನ ಭೌತಿಕ ಶರೀರದ ಹೊರಭಾಗದಲ್ಲಿ ಕವಚದೋಪಾದಿಯಲ್ಲಿ ಸೂಕ್ಷ್ಮ ಶರೀರವೂ ಇದೆ. ಈ ಸೂಕ್ಷ್ಮ ಶರೀರದಲ್ಲಿ ಉಂಟಾಗುವ ಲೋಪದೋಷಗಳಿಂದಲೇ ಭೌತಿಕ ಶರೀರದಲ್ಲಿ ರೋಗಗಳು ಕಾಣಿಸಿಕೊಳ್ಳುತ್ತವೆ. ಇಂತಹ ಲೋಪಗಳನ್ನು ಸರಿಪಡಿಸುವುದೇ ಪ್ರಾಣಿಕ್ ಹೀಲಿಂಗ್‌ನ ವೈಶಿಷ್ಟ್ಯವಾಗಿದೆ. ಇದೇನೂ ಹೊಸದಲ್ಲ. ಇದು ಭಾರತದ ಪ್ರಾಚೀನ ವಿದ್ಯೆಗಳಲ್ಲೊಂದಾಗಿದೆ. ಮನುಷ್ಯನ ಶರೀರವು ಅನ್ನಮಯ, ಪ್ರಾಣಮಯ ಹಾಗೂ ವಿಜ್ಞಾನಮಯ ಕೋಶಗಳಿಂದ ಕೂಡಿದೆಯೆಂದು ಋಗ್ವೇದದಲ್ಲಿ ವರ್ಣಿಸಿರುವುದನ್ನು ಕಾಣಬಹುದು. ಫಿಲಿಫೈನ್ಸ್‌ನ ರಾಸಾಯನಿಕ ಶಾಸ್ತ್ರಜ್ಞ ಮಾಸ್ಟರ್ ಚೋಕೋಕ್ ಸುಯಿ ಅವರು ಇದರ ಮಹತ್ವ ಅರಿತು, ಆಳವಾಗಿ ಸಂಶೋಧನೆ ಕೈಗೊಂಡು “ಪ್ರಾಣಿಕ್ ಹೀಲಿಂಗ್ ಎಂಬ ಹೆಸರಿನಿಂದ ಇಡೀ ಜಗತ್ತಿಗೆ ಪರಿಚಯಿಸಿದ್ದಾರೆ. ಅನೇಕ ಕಡೆಗಳಲ್ಲಿ ವೈದ್ಯರು ಸಹಾ ಇದನ್ನು ಕಲಿತು ಪ್ರಯೋಗಿಸುತ್ತಿದ್ದಾರೆ. ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆ ಮತ್ತು ಚೆನ್ನೈನ ಅಪೋಲೋ ಆಸ್ಪತ್ರೆಗಳಲ್ಲೂ “ಪ್ರಾಣಿಕ್ ಹೀಲಿಂಗ್ ಚಿಕಿತ್ಸೆಯ ಪ್ರತ್ಯೇಕ ವಿಭಾಗವಿರುವುದು ಇದರ ಮಹತ್ವಕ್ಕೆ ಸಾಕ್ಷಿಯಾಗಿದೆ ಎಂದು ವಿವರಿಸಿದರು. ರೋಚಕ ಪ್ರಾತ್ಯಕ್ಷತೆ: ಇದೇ ಸಂದರ್ಭದಲ್ಲಿ ಜಯಶ್ರೀ ಮತ್ತು ಸಂಗಡಿಗರು “ಪ್ರಾಣಿಕ್ ಹೀಲಿಂಗ್ನ ಪ್ರಾತ್ಯಕ್ಷತೆಯನ್ನು ನಡೆಸಿಕೊಟ್ಟರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ವಿ.ಮಹದೇವಯ್ಯ ಸೇರಿದಂತೆ ಅನೇಕ ಸಭಿಕರು ವೇದಿಕೆಯಲ್ಲೇ ಚಿಕಿತ್ಸೆಗೆ ಒಳಗಾಗಿ, ದೀರ್ಘಕಾಲೀನ ನೋವಿಗೆ ಸ್ಥಳದಲ್ಲೇ ನಿವಾರಣೆಯ ರೋಚಕ ಅನುಭವದಿಂದ ಆನಂದಿಸಿದರು. ನಂತರ ಸಿ.ವಿ.ಮಹದೇವಯ್ಯ ಮತ್ತು ಮುಖ್ಯ ಅತಿಥಿ ಕೆನರಾ ಬ್ಯಾಂಕ್ ಸೋಮೇಶ್ವರ ಪುರಂ ಶಾಖಾ ವ್ಯವಸ್ಥಾಪಕ ಕೆ.ಜಿ. ನಂಜುಂಡೇಶ್ವರ್ ಅವರು ಮಾತನಾಡುತ್ತಾ, ಭಾರತದ ಅನೇಕ ಪ್ರಾಚೀನ ವಿದ್ಯೆಗಳು ಮನುಷ್ಯನ ದೇಹಾರೋಗ್ಯ ಕಾಪಾಡಲು ಸಹಕಾರಿಯಾಗಿದ್ದು, ಅದರಲ್ಲಿ ಪ್ರಾಣಿಕ್ ಹೀಲಿಂಗ್ ಸಹಾ ಒಂದಾಗಿದೆ. ಇಂದಿನ ವಾತಾವರಣದಲ್ಲಿ ಎಲ್ಲರೂ ಇದನ್ನು ಕಲಿಯಬೇಕಾಗಿದೆ ಎಂದರು. ಸರಸ್ ಸಂಸ್ಥೆಯ ವ್ಯವಸ್ಥಾಪಕ ಆರ್.ವಿಶ್ವನಾಥನ್ ಸ್ವಾಗತಿಸಿದರು. ಪತ್ರಕರ್ತ ಆರ್.ಎಸ್.ಅಯ್ಯರ್ ವಂದಿಸಿದರು

Friday, December 5, 2008


Dated 22-09-2007
ಮತದಾರರನ್ನು ಜಾಗೃತಿಗೊಳಿಸಲು ಸರಸ್ ದಿಂದ ಕರಪತ್ರ ಬಿಡುಗಡೆ
ತುಮಕೂರು: ನಗರಸಭೆ ಚುನಾವಣೆಯಲ್ಲಿ ಮತದಾರರನ್ನು ಜಾಗೃತಿಗೊಳಿಸಲು ತುಮಕೂರಿನ ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆ ಪ್ರಕಟಿಸಿರುವ ವಿಶಿಷ್ಟ ಆಲೋಚನೆಗೆ ಪ್ರಚೋದಿಸುವಂತಹ ಕರಪತ್ರವನ್ನು ನಗರಸಭೆಯ ಕಾರ್ಯಸ್ಥಾನವಾದ ಶ್ರೀ ಕೃಷ್ಣರಾಜೇಂದ್ರ ಪುರಭವನದ ಮುಂದೆ ದಿನಾಂಕ : ೨೨-೦೯-೨೦೦೭ ರಂದು ನಡೆದ ಸಮಾರಂಭದಲ್ಲಿ ಇಬ್ಬರು ಶ್ರೀಸಾಮಾನ್ಯ ವ್ಯಕ್ತಿಗಳಿಂದ ಬಿಡುಗಡೆಗೊಳಿಸುವ ಮೂಲಕ ಜನ ಜಾಗೃತಿಗೆ ಅರ್ಥಪೂರ್ಣ ಚಾಲನೆ ನೀಡಲಾಯಿತು. ಮತದಾರರು ಜಾಗೃತರಾಗಬೇಕು. ತಪ್ಪದೇ ಮತಚಲಾಯಿಸಬೇಕು. ಆಸೆ ಆಮಿಷಗಳಿಗೆ ಬಲಿಯಾಗದೆ ಯೋಗ್ಯರನ್ನು ಚುನಾಯಿಸಬೇಕು ಎಂಬ ಆಶಯ ಹೊತ್ತಿರುವ ಈ ಕರಪತ್ರವನ್ನು ಆಟೋ ಚಾಲಕರಾದ ಇಂತಿಯಾಜ್ ಪಾಷ ಮತ್ತು ಹಮಾಲಿ ಕೆಲಸ ಮಾಡುವ ಕಾಶಿ ಬಿಡುಗಡೆಗೊಳಿಸಿ, ಮತದಾತನಾದ ಶ್ರೀಸಾಮಾನ್ಯನಿಗಿರುವ ಮಹತ್ವವನ್ನು ಸಾಂಕೇತಿಕವಾಗಿ ಪ್ರತಿಬಿಂಬಿಸಿದರು. ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆಯ ವ್ಯವಸ್ಥಾಪಕ ಆರ್.ವಿಶ್ವನಾಥನ್ ಈ ಕರಪತ್ರದ ಉದ್ದೇಶವನ್ನು ವಿವರಿಸಿದರು. ಉದ್ಯಮಿ ಗೌ.ತಿ.ರಂಗನಾಥ್, ಪತ್ರಕರ್ತ ಆರ್.ಎಸ್.ಅಯ್ಯರ್, ಗುತ್ತಿಗೆದಾರರಾದ ಎಚ್.ಎನ್.ಸತೀಶ್ ಮತ್ತು ಬಿ.ಎಸ್.ಪ್ರಕಾಶ್ ಮೊದಲಾದ ಗಣ್ಯ ನಾಗರಿಕರು ಈ ಸಂದರ್ಭದಲ್ಲಿ ಹಾಜರಿದ್ದರು. ವಕೀಲ ಎಸ್.ರಮೇಶ್ ಮಾತನಾಡಿ, ಇದೊಂದು ಅರ್ಥಪೂರ್ಣ ಹಾಗೂ ಅಪೂರ್ವ ಕಾರ್ಯಕ್ರಮವಾಗಿದ್ದು, ಶ್ರೀಸಾಮಾನ್ಯ ವ್ಯಕ್ತಿಗಳೇ ಈ ಕಾರ್ಯಕ್ರಮದಲ್ಲಿ ಗಣ್ಯರೆನಿಸಿದ್ದಾರೆ. ಇದು ನೈಜ ಪ್ರಜಾಪ್ರಭುತ್ವದ ಆಶಯವಾಗಿದೆ. ಪ್ರಸ್ತುತ ನಗರಸಭೆ ಚುನಾವಣೆಯಲ್ಲಿ ಮತದಾರರು ಜಾಗೃತರಾಗಿ, ಮತಚಲಾಯಿಸಬೇಕು. ಈ ನಿಟ್ಟಿನಲ್ಲಿ ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆಯು ಮಾದರಿಯಾದ ಕಾರ್ಯಕ್ರಮವನ್ನು ಕೈಗೊಂಡಿದೆ ಎಂದು ತಿಳಿಸಿದರು.
ಕರಪತ್ರದಲ್ಲಿ ಏನಿದೆ?:- ನಿಮ್ಮಿಂದ ಆರಿಸಿ ಹೋಗುವ ಅಭ್ಯರ್ಥಿ ನಗರಸಭೆಯಲ್ಲಿ ಯಾರಿಗೂ ಹಾಗೂ ಯಾವುದಕ್ಕೂ ಶರಣಾಗದೆ ನಿರ್ಭೀತಿಯಿಂದ, ನಿಷ್ಪಕ್ಷಪಾತವಾಗಿ ಹಾಗೂ ನಿರ್ದಾಕ್ಷಿಣ್ಯದಿಂದ ಮಾತನಾಡುವ ಮತ್ತು ಕೆಲಸ ಮಾಡುವ ಶಕ್ತಿ ಹೊಂದಿದ್ದಾರೆಯೇ? ಎಂಬ ಪ್ರಧಾನ ಪ್ರಶ್ನೆಯ ಜೊತೆಗೆ ಅಭ್ಯರ್ಥಿಗೆ ನಿಮ್ಮ ಪ್ರತಿನಿಧಿಯಾಗುವ ಅರ್ಹತೆ, ಸಾಮರ್ಥ್ಯ ಇದೆಯೇ? ಅಧ್ಯರ್ಥಿಯ ಉದ್ಯೋಗ, ವಿದ್ಯಾರ್ಹತೆ, ಹಿನ್ನೆಲೆ, ಚಟುವಟಿಕೆಗಳೇನು? ಎಂಬ ಸಂಗತಿಗಳ ಬಗ್ಗೆ ಮತದಾರರು ಆಲೋಚಿಸುವಂತೆ ಈ ಕರಪತ್ರದಲ್ಲಿ ಕೋರಲಾಗಿದೆ. ಭವಿಷ್ಯದಲ್ಲಿ ಪಶ್ಚಾತ್ತಾಪ ಪಡುವ ಬದಲು ಈಗಲೇ ಮುನ್ನೆಚ್ಚರಿಕೆ ವಹಿಸಿ ಅಭ್ಯರ್ಥಿಗಳ ಜಾತಿ, ಪಕ್ಷಕ್ಕಿಂತ ಆತನ ಗುಣಲಕ್ಷಣಗಳನ್ನು ಪರಿಶೀಲಿಸಿ ಜನಪರವಾಗಿ, ನಿರ್ವಂಚನೆಯಿಂದ ಶ್ರಮಿಸುವ ಜವಾಬ್ದಾರಿಯುತ ನಡವಳಿಕೆಯುಳ್ಳ ಹಾಗೂ ಭರವಸೆಯ ಲಕ್ಷಣಗಳುಳ್ಳ ಯೋಗ್ಯ ಅಭ್ಯರ್ಥಿಗಳನ್ನು ಗುರುತಿಸಿ, ಮತನೀಡಿ ಎಂದು ಕರಪತ್ರದಲ್ಲಿ ವಿನಂತಿಸಲಾಗಿದೆ. ಇದಲ್ಲದೆ ನಾಡಿನ ಹೆಸರಾಂತ ಸಾಹಿತಿಗಳಾದ ಡಾ ಡಿ.ವಿ.ಗುಂಡಪ್ಪ, ಡಾ ಶಿವರಾಮಕಾರಂತ, ಡಾ ಹಾ.ಮ.ನಾಯಕ್, ನಿವೃತ್ತ ನ್ಯಾಯಾಧೀಶರಾದ ಡಾ ಎಂ.ರಾಮಾಜೋಯಿಸ್, ಪತ್ರಕರ್ತ ವಿಶ್ವೇಶ್ವರ ಭಟ್ ಅವರ ಚಿಂತನೆಗಳನ್ನು ಮುದ್ರಿಸಲಾಗಿದ್ದು, ಈ ಕರಪತ್ರ ಮತದಾರರನ್ನು ಕ್ಷಣಕಾಲವಾದರೂ ಆಲೋಚನೆಗೆ ಪ್ರಚೋದಿಸುವಂತಿದೆ.

Tuesday, December 2, 2008

ಅಭಿವೃದ್ಧಿಯ ಸಫಲತೆಗೆ ಮಾಹಿತಿ ಹಕ್ಕು ಪೂರಕ

ಮಾಹಿತಿ ಮತ್ತು ಅಭಿವೃದ್ಧಿ ಎಂಬುದು ಒಂದಕ್ಕೊಂದು ಪೂರಕವಾಗಿದ್ದು, ಅಭಿವೃದ್ಧಿ ಯೋಜನೆಗಳ ಸಫಲತೆಗೆ, ಪ್ರಜಾಪ್ರಭುತ್ವದ ಯಶಸ್ಸಿಗೆ ಹಾಗೂ ಸಂವಿಧಾನದ ಆಶೋತ್ತರಗಳ ಈಡೇರಿಕೆಗೆ ಮಾಹಿತಿ ಹಕ್ಕು ಕಾಯ್ದೆಯು ಒಂದು ಪ್ರಮುಖ ಸಾಧನವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಪಿ. ಕೃಷ್ಣಭಟ್ ಅವರು ಬಲವಾಗಿ ಪ್ರತಿಪಾದಿಸಿದರು. ಅವರು ದಿನಾಂಕ: ೦೯-೦೯-೨೦೦೭ ರಂದು ತುಮಕೂರು ನಗರದ

ಶ್ರೀ ಕೃಷ್ಣ ಕಾನೂನು ಕಾಲೇಜಿನಲ್ಲಿ ಶ್ರೀ ಕೃಷ್ಣ ವಿದ್ಯಾಸಂಸ್ಥೆ ಮತ್ತು ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಏರ್ಪಟ್ಟಿದ್ದ “ ಮಾಹಿತಿ ಹಕ್ಕು ಕಾಯ್ದೆ ಮತ್ತು ವಿದ್ಯಾರ್ಥಿಗಳ ಪಾತ್ರ “ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪ್ರಜಾಪ್ರಭ್ಯುತ್ವ ಹಾಗೂ ಅಭಿವೃದ್ಧಿಗೆ ರಹಸ್ಯ ಎಂಬುದು ಬದ್ಧ ವೈರಿಯಾಗಿದೆ ಎಂದು ಬಣ್ಣಿಸಿದ ಅವರು, ಆಡಳಿತದಲ್ಲಿ ಈ ಹಿಂದೆ ಜಾರಿಯಲ್ಲಿದ್ದ ರಹಸ್ಯ ಕಾಯ್ದೆಯಿಂದ ಆರಂಭಿಸಿ, ಇಂದು ಯಾವುದೇ ಮಾಹಿತಿಯನ್ನು ಪಡೆಯಬಹುದಾದ ಮಾಹಿತಿ ಹಕ್ಕು ಕಾಯ್ದೆಯವರೆಗಿನ ಹಾದಿ ಅತ್ಯಂತ ದುರ್ಗಮವಾಗಿತ್ತು. ಆದರೆ ಅನೇಕ ಮಂದಿ ನಿಸ್ವಾರ್ಥ ಹಾಗೂ ಅಭಿವೃದ್ಧಿಪರ ಹೋರಾಟಗಾರರ ನಿರಂತರ ಪ್ರಯತ್ನಗಳಿಂದ ಇಂದು ನಾವು ಈ ಮಾಹಿತಿ ಯುಗವನ್ನು ಪ್ರವೇಶಿಸಿದ್ದೇವೆ ಎಂದರು. ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ನಂತರ ಆಡಳಿತಗಾರರ ಚರ್ಮ ಬದಲಾಯಿತೇ ವಿನಃ, ಮನೋಭಾವ ಮಾತ್ರ ಬದಲಾಗಲಿಲ್ಲ. ಆದರೆ ಸ್ವಾತಂತ್ರ್ಯ ದೊರೆತ ೬೦ ವರ್ಷಗಳ ನಂತರವಾದರೂ ಮಾಹಿತಿ ಪಡೆಯುವ ಸ್ವಾತಂತ್ರ್ಯ ದೊರೆತಿರುವುದು ಸಂತಸದ ವಿಷಯವಾಗಿದೆ. ಪ್ರಜೆಗಳಿಂದ, ಪ್ರಜೆಗಳಿಗಾಗಿ ಹಾಗೂ ಪ್ರಜೆಗಳಿಗೋಸ್ಕರ ಎಂಬ ಪ್ರಜಾಪ್ರಭುತ್ವದ ಆಶಯ ಈಗ ಈಡೇರಿದೆ ಎಂದು ಕೃಷ್ಣಭಟ್ ಅವರು ವಿಮರ್ಶಿಸಿದರು. ಅಭಿವೃದ್ಧಿಯ ಹಣವೆಲ್ಲ ಗುಳುಂ ಆಗಿಬಿಟ್ಟರೆ ಗತಿಯೇನು ? :- ಕಾರ್ಯಾಗಾರವನ್ನು ನಡೆಸಿಕೊಟ್ಟ ಬೆಂಗಳೂರಿನ ಕ್ರಿಯೇಟ್ ಸಂಸ್ಥೆಯ ಮುಖ್ಯಸ್ಥರಾದ ವೈ.ಜಿ. ಮುರಳೀಧರನ್ ಅವರು ಮಾತನಾಡಿ, ಸರ್ಕಾರದಿಂದ ಮಂಜೂರಾದ ಹಣವೆಲ್ಲ ಅಭಿವೃದ್ಧಿ ಯೋಜನೆಗೆ ಬಳಕೆಯಾಗದೆ, ಭ್ರಷ್ಟಾಚಾರದಲ್ಲೇ ಕರಗಿ ಹೋದರೆ, ಅಭಿವೃದ್ಧಿ ಯೋಜನೆ ಹೇಗೆ ಸಾಧ್ಯ ಎಂಬುದನ್ನು ವಿದ್ಯಾರ್ಥಿಗಳೂ ಸೇರಿದಂತೆ ಎಲ್ಲ ನಾಗರಿಕರೂ ಚಿಂತನೆ ನಡೆಸಿ, ಮಾಹಿತಿ ಹಕ್ಕು ಕಾಯ್ದೆಯನ್ನು ಬಳಸಿಕೊಳ್ಳಬೇಕೆಂದು ಕರೆ ನೀಡಿದರು. ಅಮೆರಿಕ ಗಗನ ನೌಕೆ ಕೊಲಂಬಿಯಾ ದುರ್ಘಟನೆಯಲ್ಲಿ ಕಲ್ಪನಾ ಚಾವ್ಲಾ ಸೇರಿದಂತೆ ಹಲವರು ಮೃತಪಟ್ಟಾಗ, ಇಂಗ್ಲೆಂಡಿನ ಬಿ.ಬಿ.ಸಿ. ಸಂಸ್ಥೆಯು ಅಲ್ಲಿನ ಮಾಹಿತಿ ಕಾಯ್ದೆ ಬಳಸಿಕೊಂಡು ಅಮೆರಿಕಾದ ನಾಸಾ ಸಂಸ್ಥೆಯನ್ನು ಪ್ರಶ್ನಿಸುವ ಮೂಲಕ ಹಲವಾರು ಅಂಶಗಳನ್ನು ಬೆಳಕಿಗೆ ತಂದಪ್ರಸಂಗವನ್ನು ಉದಾಹರಿಸಿ, ಆಡಳಿತದ ಎಲ್ಲ ಹಂತದಲ್ಲಿ ಪಾರದರ್ಶಕತೆ, ನೈತಿಕತೆ, ಜವಾಬ್ದಾರಿ ಉಂಟು ಮಾಡಲು ಭಾವಿ ಪ್ರಜೆಗಳಾದ ವಿದ್ಯಾರ್ಥಿಗಳು ಈ ಹಕ್ಕನ್ನು ಚಲಾಯಿಸಲು ವಿನಂತಿಸಿದರು. ವಿದ್ಯಾಸಂಸ್ಥೆಯ ಕಾರ್ಯದರ್ಶಿ ಮರಿಚೆನ್ನಮ್ಮ ಅವರು ಅಧ್ಯಕ್ಷತೆ ವಹಿಸಿದ್ದರು. ಕಾನೂನು ಕಾಲೇಜಿನ ಪ್ರಾಚಾರ್ಯ ಎಸ್. ರಮೇಶ್, ವಿದ್ಯಾಸಂಸ್ಥೆಯ ನಿರ್ದೇಶಕಿ ವೀಣಾ, ಮತ್ತೋರ್ವ ಪ್ರಾಚಾರ್ಯ ನಾಗೇಶ್ ವೇದಿಕೆಯಲ್ಲಿದ್ದರು. ಟಿ.ಎಸ್.ಅನುಪಮ ಸ್ವಾಗತಿಸಿದರು. ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆಯ ವ್ಯವಸ್ಥಾಪಕ ಆರ್. ವಿಶ್ವನಾಥನ್ ವಂದಿಸಿ, ಮುರುಳಿ ಕಾರ್ಯಕ್ರಮ ನಿರೂಪಿಸಿದರು.

Friday, September 19, 2008




Dated 25-06-2007

ಮಾಹಿತಿ ಹಕ್ಕು ಕಾಯ್ದೆ: ಸುಗಮ ಬದುಕಿಗೆ ಸಹಕಾರಿ

ತುಮಕೂರು : ಮಾಹಿತಿ ಹಕ್ಕು ಕಾಯ್ದೆಯು ಆಡಳಿತದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ, ಉತ್ತರದಾಯಿತ್ವ ಮೂಡಿಸುವ ಮೂಲಕ ಜನಜೀವನ ಸುಗಮವಾಗಲು ಸಹಕಾರಿಯಾಗಿದೆ ಎಂದು ಬೆಂಗಳೂರಿನ ಗ್ರಾಹಕ ಹಕ್ಕು, ಶಿಕ್ಷಣ ಮತ್ತು ಜಾಗೃತಿ ಟ್ರಸ್ಟ್ ನ ಮುಖ್ಯಸ್ಥರಾದ ವೈ.ಜಿ.ಮುರಳೀಧರನ್ ಅವರು ವಿಶ್ಲೇಷಿಸಿದರು. ಅವರು ದಿನಾಂಕ ೨೫-೦೬-೨೦೦೭ ರಂದು ತುಮಕೂರು ನಗರದ ಗಾಯತ್ರಿ ಸಮುದಾಯ ಭವನದಲ್ಲಿ ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆ ಮತ್ತು ಎಲ್.ಐ.ಸಿ. ಪ್ರತಿನಿಧಿಗಳ ಸಂಘ (ತುಮಕೂರು ಶಾಖೆ ೧ ಮತ್ತು ಶಾಖೆ ೨) ಗಳ ಸಂಯುಕ್ತಾಶ್ರಯದಲ್ಲಿ ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ಏರ್ಪಟ್ಟಿದ್ದ ವಿಶೇಷ ತರಬೇತಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಈ ಕಾಯ್ದೆಯನ್ನು ಜನರು ತಮ್ಮ ವೈಯಕ್ತಿಕ ಸಮಸ್ಯೆಗಳ ನಿವಾರಣೆಗಾಗಿಯೂ ಬಳಸಿಕೊಳ್ಳಬಹುದು. ಜೊತೆಗೆ ಸಾಮಾಜಿಕ ಕಳಕಳಿ ಇದ್ದರೆ ಸಾರ್ವಜನಿಕ ಹಿತಾಸಕ್ತಿಯ ವಿಷಯಕ್ಕೂ ಧಾರಾಳವಾಗಿ ಉಪಯೋಗಿಸಿಕೊಳ್ಳಬಹುದು. ಜನಸಾಮಾನ್ಯರ ಪಾಲಿಗೆ ಇದೊಂದು ಪರಿಣಾಮಕಾರಿ ಅಸ್ತ್ರವಾಗಿದ್ದು, ಬಳಕೆ ಮಾಡಲು ಸ್ವಲ್ಪ ಧೈರ್ಯ ಇರಬೇಕಷ್ಟೇ ಎಂದು ಮಾರ್ಮಿಕವಾಗಿ ನುಡಿದರು. ಎಲ್ಲ ಕಾಯ್ದೆ, ಕಾನೂನುಗಳ ಬಳಕೆಯಲ್ಲೂ ಇನ್ನೊಂದು ಮುಖ ಇರುವಂತೆ, ಈ ಕಾಯ್ದೆ ಬಳಕೆಯಲ್ಲೂ ಬ್ಲಾಕ್ ಮೇಲ್ ತಂತ್ರ ಇದೆಯೆಂಬ ಆರೋಪಗಳು ಕೇಳಿಬರುತ್ತಿವೆ. ಜನಸಾಮಾನ್ಯರಿಗಿಂತಲೂ ಯೂನಿಯನ್ ಮುಖಂಡರು, ನಿವೃತ್ತರು, ವಿರೋಧಿಗಳು ವೈಯಕ್ತಿಕ ದ್ವೇಷದಿಂದ ಅರ್ಜಿ ಹಾಕುತ್ತಾರೆಂಬ ದೂರುಗಳೂ ಇವೆ. ಆದರೆ ಎಲ್ಲ ಅರ್ಜಿಗಳೂ, ಎಲ್ಲ ಪ್ರಶ್ನೆಗಳೂ ಹಾಗೆಯೇ ಇರುವುದಿಲ್ಲ. ಎಲ್ಲೋ ಕೆಲವೊಂದು ಪ್ರಕರಣಗಳು ಹಾಗಾಗಬಹುದು. ಅದೇನೇ ಇದ್ದರೂ ಜನರು ಮುಂದಿಟ್ಟ ಪ್ರಶ್ನೆಗಳಿಗೆ ಸಂಬಂಧಿಸಿದ ಇಲಾಖೆಯವರು ಉತ್ತರ್ ಕೊಡಲೇಬೇಕಾಗುತ್ತದೆ. ಇದು ಅನಿವಾರ್ಯ ಎಂದು ಉದಾಹರಣೆಗಳ ಸಹಿತ ವಿವರಿಸಿದ ಮುರಳೀಧರನ್ ಅವರು, ಇಂದು ಪ್ರಶ್ನೆ ಕೇಳುವ ಬಗ್ಗೆಯೂ ಜನಜಾಗೃತಿ ಮೂಡಿಸಬೇಕು. ಜನತೆಗೆ ಒಳಿತಾಗುವಂತಹ ಪ್ರಶ್ನೆಗಳನ್ನು ಕೇಳುವಂತಾಗಬೇಕು ಎಂದು ಆಶಿಸಿದರು. ಪ್ರತಿ ಇಲಾಖೆಯೂ ತನ್ನ ಕರ್ತವ್ಯ ವ್ಯಾಪ್ತಿಗೆ ಸಂಬಂಧಿಸಿದ ಕನಿಷ್ಟ ಮಾಹಿತಿಗಳನ್ನು ಸಿದ್ಧವಾಗಿಡುವುದು ಆದ್ಯ ಕರ್ತವ್ಯ ಆಗಿದೆ. ಪ್ರಶ್ನಿಸುವ ಪ್ರವೃತ್ತಿಯಿಂದ ಸಂಬಂಧಿಸಿದ ಇಲಾಖೆಗಳಲ್ಲಿ ಮಾಹಿತಿಯ ಉನ್ನತೀಕರಣ ಸಾಧ್ಯವಾಗುತ್ತದೆ. ಇದರಿಂದ ದಾಖಲಾತಿ ಪದ್ಧತಿ ಸಮರ್ಪಕಗೊಳ್ಳುತ್ತದೆ. ದಾಖಲಾತಿ ಪದ್ಧತಿ ಸರಿಯಿದ್ದರೆ ಮಾಹಿತಿ ಕೊಡುವುದು ಸುಲಭವಾಗುತ್ತದೆ ಎಂದು ಮುರಳೀಧರನ್ ಅವರು ಅಭಿಪ್ರಾಯಪಟ್ಟರು. ಕಾರ್ಯಾಗಾರವನ್ನು ಉದ್ಘಾಟಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಎಂ. ಗಿರಿಧರ್ ಅವರು ಮಾತನಾಡಿ, ಆಡಳಿತದಲ್ಲಿ ಪಾರದರ್ಶಕತೆ ಮೂಡಲು ಈ ಕಾಯ್ದೆಯು ಸಹಕಾರಿಯಾಗಿದೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಇಂತಹ ಕಾರ್ಯಾಗಾರದ ಅಗತ್ಯತೆ ಇದೆ ಎಂದರು. ಮುಖ್ಯ ಅತಿಥಿಗಳಾಗಿದ್ದ ನಗರಸಭೆ ಆಯುಕ್ತ ಅಬ್ದುಲ್ ಖಯ್ಯೂಂ ಅವರು ಮಾತನಾಡಿ, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ಮೂಡಲು ಮಾಹಿತಿ ಕಾಯ್ದೆಯು ಸಹಕಾರಿಯಾಗಿದೆ. ಈ ಪವಿತ್ರ ಅಸ್ತ್ರವನ್ನು ದ್ವೇಷಕ್ಕೆ ಬಳಸದೆ, ದುರಪಯೋಗ ಮಾಡಿಕೊಳ್ಳದೆ, ಸಾರ್ವಜನಿಕರ ಒಳಿತಿಗೆ ಬಳಸಬೇಕು ಎಂದು ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿದ್ದ ಮಾಜಿ ನಗರಸಭಾಧ್ಯಕ್ಷ ಹಾಗೂ ಗಾಯತ್ರಿ ಸಹಕಾರ ಸಂಘದ ಅಧ್ಯಕ್ಷ ಆರ್.ಎನ್.ಸತ್ಯನಾರಾಯಣ ಅವರು ಮಾತನಾಡಿ, ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದ ನಂತರ ಕಛೇರಿಗಳಲ್ಲಿ ಒಂದು ರೀತಿಯ ಜಾಗೃತಿ ಮೂಡುತ್ತಿದ್ದು, ತಪ್ಪುಗಳ ಪ್ರಮಾಣ ಕಡಿಮೆಯಾಗುತ್ತಿದೆ. ಈ ಕಾಯ್ದೆಯಡಿ ಬಂದ ಅರ್ಜಿಗಳಿಗೆ ಆದ್ಯತೆ ದೊರಕುತ್ತಿದೆ. ಜನರೂ ಸಹ ಯಾವುದೋ ತಪ್ಪುಗಳನ್ನೇ ಹುಡುಕದೆ, ತಮ್ಮ ವೈಯಕ್ತಿಕ ಸಮಸ್ಯೆ ನಿವಾರಣೆಗಾಗಿ ಅಥವಾ ಸಾರ್ವಜನಿಕ ಹಿತಕ್ಕಾಗಿ ಈ ಕಾಯ್ದೆಯನ್ನು ಬಳಸಬೇಕು ಎಂದು ನುಡಿದರು. ಸಿ.ಜೆ. ರಮ್ಯ ಪ್ರಾರ್ಥಿಸಿದರು. ಎಲ್.ಐ.ಸಿ. ಪ್ರತಿನಿಧಿಗಳ ಸಂಘದ ಅಧ್ಯಕ್ಷ ಭರತ್ ಕುಮಾರ್ ಜೈನ್ ಸ್ವಾಗತಿಸಿದರು. ಪತ್ರಕರ್ತ ಆರ್.ಎಸ್.ಅಯ್ಯರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಾಗಾರದ ಉದ್ದೇಶ ವಿವರಿಸಿದರು. ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆಯ ವ್ಯವಸ್ಥಾಪಕ ಆರ್.ವಿಶ್ವನಾಥನ್ ಕಾರ್ಯಕ್ರಮ ನಿರೂಪಿಸಿದರು. ಲಿಂಗಪ್ಪ ವಂದಿಸಿದರು. ಶಾಖೆ ೨ ರ ಅಧ್ಯಕ್ಷ ಜ್ಯೋತಿಪ್ರಕಾಶ್ ವೇದಿಕೆಯಲ್ಲಿದ್ದರು. ಕಾರ್ಯಾಗಾರದಲ್ಲಿ ಸರ್ಕಾರಿ ಅಧಿಕಾರಿಗಳು, ಮಾಜಿ ನಗರಸಭಾ ಸದಸ್ಯರು, ಮಹಿಳೆಯರು, ವಕೀಲರು, ವಿದ್ಯಾರ್ಥಿಗಳು, ಉದ್ಯಮಿಗಳು ಸೇರಿದಂತೆ ಜಿಲ್ಲಾದ್ಯಂತದಿಂದ ನೂರಕ್ಕೂ ಅಧಿಕ ನಾಗರಿಕರು ಪಾಲ್ಗೊಂಡಿದ್ದರು.
ಜನ ಜಾಗೃತರಾಗದಿದ್ದರೆ ಮಾಹಿತಿ ಕಾಯ್ದೆಯೂ ಕಣ್ಮರೆ ಸಂಭವ
ತುಮಕೂರು:
“ಜನತೆಯ ಒತ್ತಡದಿಂದ, ಜನತೆಗಾಗಿ ಜಾರಿಗೆ ಬಂದಿರುವ ಮಾಹಿತಿ ಹಕ್ಕು ಕಾಯ್ದೆಯ ಶಕ್ತಿಯನ್ನು ಕುಂದಿಸಲು ಹಲವು ಪ್ರಯತ್ನಗಳು ನಡೆದಿವೆ. ವಿವಿಧ ಕ್ಷೇತ್ರಗಳು ಈ ಕಾಯ್ದೆಯಿಂದ ತಮಗೆ ವಿನಾಯಿತಿ ನೀಡುವಂತೆ ಒತ್ತಡ ಹೇರುತ್ತಿವೆ. ಆ ಮೂಲಕ ಈ ಕಾಯ್ದೆಯ ಅದ್ಭುತವಾದ ಶಕ್ತಿಯನ್ನು ಕುಂದಿಸುವ ಯತ್ನ ನಡೆದಿದೆ ಎಂದು ಆತಂಕದಿಂದ ನುಡಿದ ಬೆಂಗಳೂರಿನ ‘ಕ್ರಿಯೇಟ್ (ಗ್ರಾಹಕ ಹಕ್ಕು, ಶಿಕ್ಷಣ ಮತ್ತು ಜಾಗೃತಿ ಟ್ರಸ್ಟ್) ನ ಮುಖ್ಯಸ್ಥರಾದ ವೈ.ಜಿ.ಮುರಳೀಧರನ್ ಅವರು, “ಜನತೆ ಜಾಗೃತರಾಗಿ ಈ ಕಾಯ್ದೆಯ ಉಳಿವಿಗಾಗಿ ಒತ್ತಡ ತರಬೇಕು ಹಾಗೂ ಯಥೇಚ್ಛವಾಗಿ ಈ ಕಾಯ್ದೆಯನ್ನು ನಿರ್ಭೀತಿಯಿಂದ ಬಳಸಲು ಮುಂದಾಗಬೇಕು ಎಂದು ಕರೆ ನೀಡಿದರು. ಅವರು ದಿನಾಂಕ ೨೫-೦೬-೨೦೦೭ ರಂದು ತುಮಕೂರು ನಗರದ ಗಾಯತ್ರಿ ಸಮುದಾಯ ಭವನದಲ್ಲಿ ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆ ಮತ್ತು ಎಲ್.ಐ.ಸಿ. ಪ್ರತಿನಿಧಿಗಳ ಸಂಘ (ತುಮಕೂರು ಶಾಖೆ ೧ ಮತ್ತು ಶಾಖೆ ೨) ಗಳ ಸಂಯುಕ್ತಾಶ್ರಯದಲ್ಲಿ “ ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ಏರ್ಪಟ್ಟಿದ್ದ ವಿಶೇಷ ತರಬೇತಿ ಕಾರ್ಯಾಗಾರದಲ್ಲಿ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು. “ಅನೇಕ ಸಂದರ್ಭಗಳಲ್ಲಿ ಪ್ರಶ್ನೆ ಕೇಳಿದರೆ ಏನಾಗಿಬಿಡುವುದೋ ? ಯಾರೇನು ತಿಳಿದುಕೊಂಡು ಬಿಡುವರೋ ? ಎಂಬ ಅಳುಕು ಉಂಟಾಗಬಹುದು. ಆದರೆ ಈ ವಿಷಯದಲ್ಲಿ ಮೈ ಚಳಿ ಬಿಡಬೇಕಾಗುತ್ತದೆ. ವೈಯಕ್ತಿಕ ವಿಚಾರಗಳ ಜೊತೆಗೆ ಸಾಮಾಜಿಕ ಕಳಕಳಿಯಿಂದ ಪ್ರಶ್ನೆ ಕೇಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಇದರಿಂದ ಆಡಳಿತದಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ ಮೂಡುವುದು. ಆಡಳಿತದಲ್ಲಿ ದಾಖಲಾತಿ ವ್ಯವಸ್ಥೆ ಸಮರ್ಪಕಗೊಳ್ಳುವುದು. ಇನ್ನೂ ಹೆಚ್ಚಿನ ಆಸಕ್ತಿಯಿದ್ದರೆ ಒಂದು ವಿಷಯದ ಜಾಡು ಹಿಡಿದು ಆಮೂಲಾಗ್ರವಾಗಿ ಪ್ರಶ್ನಿಸುತ್ತ ಹೋಗಬಹುದು ಎಂದು ಹೇಳಿದರು. ಈ ಕಾಯ್ದೆಯ ಪ್ರಕಾರ ಜನಸಾಮಾನ್ಯ ಮತ್ತು ಜನಪ್ರತಿನಿಧಿಗಳು ಮಾಹಿತಿ ದೃಷ್ಟಿಯಲ್ಲಿ ಸಮಾನರಾಗುತ್ತಾರೆ. ಇದು ಈ ದೇಶದ ಶ್ರೀ ಸಾಮಾನ್ಯನಿಗೆ ಲಭಿಸಿರುವ ಬಹುದೊಡ್ಡ ಅಸ್ತ್ರವಾಗಿದೆ. ಯಾರ ಸಹಾಯವೂ ಇಲ್ಲದೆಯೂ ಓರ್ವ ವ್ಯಕ್ತಿ ತನಗೆ ಬೇಕಾದ ಮಾಹಿತಿಯನ್ನು ಪಡೆಯಬಹುದಾದ ಅತಿ ಸರಳ ಕಾಯ್ದೆ ಇದಾಗಿದೆ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳೂ ಮಾಹಿತಿ ಕಾಯ್ದೆಯನ್ನು ಸಮರ್ಥವಾಗಿ ಬಳಸಿಕೊಳ್ಳಬಹುದು ಎಂದು ಅನೇಕ ಉದಾಹರಣೆಗಳೊಂದಿಗೆ ಮುರಳೀಧರನ್ ಅವರು ವಿವರಿಸಿದರು. ೨೦೦೫ ರ ಅಕ್ಟೋಬರ್ ೧೨ ರಂದು ಮಾಹಿತಿ ಹಕ್ಕು ಕಾಯ್ದೆಯು ಪೂರ್ಣ ರೂಪದಲ್ಲಿ ಜಾರಿಗೆ ಬಂದಿತು. ಆ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಬಂದ ಆರು ದಶಕಗಳ ನಂತರ ನಾಗರಿಕರಿಗೆ “ ಮಾಹಿತಿ ಸ್ವಾತಂತ್ರ್ಯ ಲಭಿಸಿತು. ಈ ಕಾಯ್ದೆಯಿಂದಾಗಿ ಇಂದು ಸರ್ಕಾರಿ ದಾಖಲೆಗಳಾವುದೂ ಗೌಪ್ಯವಲ್ಲ.ಈ ಕಾಯ್ದೆಯಲ್ಲಿ ನಿಗದಿಪಡಿಸಿದ ಕೆಲವು ವಿಷಯಗಳನ್ನು ಬಿಟ್ಟು ಮಿಕ್ಕೆಲ್ಲ ದಾಖಲಾತಿಗಳೂ ಈಗ ಸರ್ಕಾರದ ಅಥವಾ ಸರ್ಕಾರಿ ನೌಕರರ ಸ್ವತ್ತಲ್ಲ. ಅವೆಲ್ಲವೂ ಈಗ ಸಾರ್ವಜನಿಕರ ಸ್ವತ್ತು ಎಂದು ಹೇಳಿದ ಅವರು, ಪೊಲೀಸ್ ಇಲಾಖೆಗೆ ಈ ಕಾಯ್ದೆಯಿಂದ ವಿನಾಯಿತಿಯೇನೂ ಇಲ್ಲ ಎಂದು ನಿದರ್ಶನಗಳ ಮೂಲಕ ಸ್ಪಷ್ಟಪಡಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಛೇರಿಗಳು, ಸರ್ಕಾರಿ ಶಾಲಾ-ಕಾಲೇಜುಗಳು, ಅನುದಾನಿತ ಶಾಲಾ-ಕಾಲೇಜುಗಳು, ಒಂದು ವೇಳೆ ಸರ್ಕಾರದ ಅನುದಾನ ಪಡೆಯದಿದ್ದರೂ ಸರ್ಕಾರದ ನಿಯಮಾವಳಿಗೊಳಪಟ್ಟ ಶಿಕ್ಷಣ ಸಂಸ್ಥೆಗಳು, ಸಹಕಾರಿ ಸಂಸ್ಥೆಗಳು, ಸ್ಟಾಕ್ ಎಕ್ಸ್‌ಚೇಂಜ್, ವಿಮಾ ಕಂಪನಿಗಳು, ಬ್ಯಾಂಕ್‌ಗಳು ಹೀಗೆ ಎಲ್ಲವೂ ಈ ಕಾಯ್ದೆಯ ವ್ಯಾಪ್ತಿಗೆ ಒಳಪಡುತ್ತವೆ. ಯಾವುದೇ ಕಛೇರಿಯಲ್ಲಿ ಫೈಲ್‌ಗಳನ್ನು ಉಚಿತವಾಗಿ ಪರಿಶೀಲಿಸುವ ಅಧಿಕಾರ, ರಸ್ತೆ ಕಾಮಗಾರಿ ಸೇರಿದಂತೆ ಬೇರೆ ಯಾವುದೇ ಸರ್ಕಾರಿ ನಿರ್ಮಾಣ ಕಾಮಗಾರಿಗಳನ್ನು ಪರೀಕ್ಷಿಸುವ , ಸ್ಯಾಂಪಲ್ ಪಡೆಯುವ ಅಧಿಕಾರ ಈ ಕಾಯ್ದೆಯ ಪ್ರಕಾರ ಶ್ರೀ ಸಾಮಾನ್ಯನಿಗಿದೆ. ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಸಭೆಗಳಿಗೆ, ಅಷ್ಟೇಕೆ ಜಿಲ್ಲಾಧಿಕಾರಿ ಕಛೇರಿಗಳಲ್ಲಿ ಇಬ್ಬರು ಅಧಿಕಾರಿಗಳಿಗಿಂತ ಹೆಚ್ಚು ಅಧಿಕಾರಿಗಳು ಸೇರಿ ನಡೆಸುವ ಸಭೆಗೂ ನಾಗರಿಕರು ಪ್ರೇಕ್ಷಕರಾಗಿ ಕುಳಿತುಕೊಳ್ಳಲು ಅವಕಾಶವಿದೆ ಎಂದ ವೈ.ಜಿ.ಮುರಳೀಧರನ್ ಅವರು ಈ ಕಾಯ್ದೆಯ ವಿವಿಧ ಸ್ವರೂಪಗಳನ್ನು ಕೂಲಂಕಷವಾಗಿ ವಿವರಿಸಿದರು.





Thursday, September 4, 2008


ಮಾಹಿತಿ ಹಕ್ಕು ಚಲಾಯಿಸಲು ಜನತೆಗೆ ಕರೆ

ತುಮಕೂರು: “ಪ್ರಜಾಪ್ರಭುತ್ವದ ಯಶಸ್ಸಿಗೆ ಹಾಗೂ ಆಡಳಿತದಲ್ಲಿಪಾರದರ್ಶಕತೆಗಾಗಿ ‘ ಮಾಹಿತಿ ಹಕ್ಕು ಎಂಬ ಪರಮಾಧಿಕಾರವನ್ನು ನಾಗರಿಕರು ನಿಸ್ಸಂಕೋಚವಾಗಿ ಚಲಾಯಿಸಬೇಕು ಎಂದು ಪತ್ರಕರ್ತ ಎಂ.ಎನ್.ಕೋಟೆನಾಗಭೂಷಣ್ ಅವರು ಕರೆ ನೀಡಿದರು.
ಮಾಹಿತಿ ಹಕ್ಕು ಕಾಯ್ದೆಯು ಜಾರಿಗೆ ಬಂದು ಒಂದು ವರ್ಷವಾದ ನೆನಪಿಗಾಗಿ ದಿನಾಂಕ 11-10-2006 ರಂದು ತುಮಕೂರು ನಗರದ ಬಾಸ್ ಟ್ಯುಟೋರಿಯಲ್ಸ್ ಸಭಾಂಗಣದಲ್ಲಿ “ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆಯು ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮುಖ್ಯ ಭಾಷಣ ಮಾಡುತ್ತಿದ್ದರು.
ಮಾಹಿತಿಯೊಂದನ್ನು ಪಡೆಯಲು ಓರ್ವ ಜನಪ್ರತಿನಿಧಿಗಿರುವಷ್ಟೇ ಅಧಿಕಾರವನ್ನು‌ಈ ಕಾಯ್ದೆಯು ಶ್ರೀಸಾಮಾನ್ಯನಿಗೂ ಒದಗಿಸಿಕೊಟ್ಟಿದೆ. ಲೋಕಸಭೆ, ವಿಧಾನಸಭೆಗೆ ಲಭ್ಯವಾಗಬಹುದಾದ ಮಾಹಿತಿಗಳು ಈ ಕಾಯ್ದೆಯ ಪರಿಣಾಮವಾಗಿ ಶ್ರೀಸಾಮಾನ್ಯನಿಗೂ ಸುಲಭವಾಗಿ ದೊರಕಲಿದೆ. ಕೇವಲ ಹತ್ತು ರೂ. ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸುವ ಮೂಲಕ ಬೇಕಾದ ಮಾಹಿತಿಯನ್ನು ನಿಗದಿತ ಹಣ ನೀಡಿ ಪಡೆದುಕೊಳ್ಳಬಹುದಾಗಿದೆ ಎಂದು ಕಾಯ್ದೆಯ ವೈಶಿಷ್ಟ್ಯವನ್ನು ಬಣ್ಣಿಸಿದರು.
ಅರ್ಜಿ ಸಲ್ಲಿಸಿದ 30 ದಿನಗಳಲ್ಲಿ ಸಂಬಂಧಿಸಿದವರು ಉತ್ತರ ನೀಡಬೇಕು. ಅರ್ಜಿ ಸ್ವೀಕರಿಸದಿದ್ದರೆ, ನಿರಾಕರಿಸಿದರೆ, ವಿಳಂಬ ಮಾಡಿದರೆ, ತಪ್ಪು ಮಾಹಿತಿ ನೀಡಿದರೆ, ಮಾಹಿತಿ ನೀಡಲು ತೊಂದರೆ ಕೊಟ್ಟರೆ, ಮಾಹಿತಿಯನ್ನು ನಾಶ ಮಾಡಿದರೆ, ಸಂಬಂಧಪಟ್ಟವರು ಕಾನೂನು ಕ್ರಮಕ್ಕೆ ಒಳಗಾಗಬೇಕಾಗುತ್ತದೆ. 30 ದಿನಗಳ ನಂತರವೂ ಉತ್ತರ ನೀಡದಿದ್ದರೆ, ಪ್ರತಿದಿನ 250 ರೂ. ಗಳಂತೆ ದಂಡ ವಿಧಿಸಿ, ಸಂಬಂಧಪಟ್ಟವರ ವೇತನದಿಂದ ಆ ಹಣವನ್ನು ಜಮಾ ಮಾಡಿಕೊಳ್ಳಬೇಕಾಗುತ್ತದೆ. ಅಲ್ಲದೆ ಅವರ ಸೇವಾ ದಾಖಲಾತಿಯಲ್ಲಿ ನಮೂದಾಗುತ್ತದೆ ಎಂದು ಕಾಯ್ದೆ ಬಗ್ಗೆ ವಿವರಿಸಿದರು.
ಈ ಕಾಯ್ದೆಯ ಪ್ರಕಾರ ಪ್ರತಿ ಇಲಾಖೆಯೂ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ ಯಾರೆಂಬ ಫಲಕವನ್ನು ಹಾಕಬೇಕು. ಆದರೆ ಜಿಲ್ಲೆಯಲ್ಲಿ ಇದು ಎಷ್ಟು ಜಾರಿಗೆ ಬಂದಿದೆ ಎಂಬುದು ಪ್ರಶ್ನಾರ್ಹವಾಗಿದೆ ಎಂದು ಹೇಳಿದರು.
ತುಮಕೂರು ನಗರಸಭೆಯು ತನ್ನ ಎಲ್ಲ ಕೆಲಸ ಕಾರ್ಯಗಳ ವಿವರವನ್ನು ವೆಬ್ ಸೈಟ್ ಮೂಲಕ ಸ್ಪಷ್ಟಪಡಿಸುತ್ತಿರುವುದು ಪ್ರಶಂಸಾರ್ಹವಾಗಿದೆ ಎಂದ ಕೋಟೆ ನಾಗಭೂಷಣ್ ಅವರು, ಈ ಕೆಲಸವನ್ನು ಇನ್ನೂ ಸಹ ಜಿಲ್ಲಾಡಳಿತ ಮಾಡಿಲ್ಲ ಎಂದು ಟೀಕಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಪುರಸಭಾಧ್ಯಕ್ಷ ಕೆ.ಎನ್.ವೆಂಕಟಾಚಲಪತಿ (ಚಲಿ) ಅವರು ಮಾತನಾಡಿ, ಭ್ರಷ್ಟಾಚಾರ ನಿಯಂತ್ರಿಸಲು ಈ ಕಾಯ್ದೆ ಪ್ರಬಲ ಅಸ್ತ್ರವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಜೇಸೀಸ್ ವಲಯಾಧ್ಯಕ್ಷ ಭರತ್ ಕುಮಾರ್ ಜೈನ್ ಅವರು, ಈ ಕಾಯ್ದೆಯ ಮೂಲಕ ನೈಜ ಪ್ರಜಾಪ್ರಭುತ್ವ ಜಾರಿಗೆ ಬರುತ್ತಿದೆ ಎಂದು ಅಭಿಪ್ರಾಯಪಟ್ಟರು. ಸರಸ್ ವ್ಯವಸ್ಥಾಪಕ ಆರ್.ವಿಶ್ವನಾಥನ್ ಸ್ವಾಗತಿಸಿದರು. ಪತ್ರಕರ್ತ ಆರ್.ಎಸ್.ಅಯ್ಯರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು. ಟಿ.ಜಿ.ವೇದಮೂರ್ತಿ ವಂದಿಸಿದರು. ಕಾರ್ಯಕ್ರಮದಲ್ಲಿ ಮಾಜಿ ನಗರಸಭಾಧ್ಯಕ್ಷ ಆರ್.ಎನ್. ಸತ್ಯನಾರಾಯಣ, ನಗರಸಭಾ ಸದಸ್ಯರಾದ ಡಿ.ಆರ್.ಬಸವರಾಜು ಮತ್ತು ಪಿ.ಎಸ್.ರಮೇಶ್, ಮಾಜಿ ಸಿಂಡಿಕೇಟ್ ಸದಸ್ಯ ಕೆ. ನಯಾಜ್ ಅಹಮದ್, ಪತ್ರಕರ್ತ ಎಚ್.ಎಸ್. ರಾಮಣ್ಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.