Friday, December 5, 2008


Dated 22-09-2007
ಮತದಾರರನ್ನು ಜಾಗೃತಿಗೊಳಿಸಲು ಸರಸ್ ದಿಂದ ಕರಪತ್ರ ಬಿಡುಗಡೆ
ತುಮಕೂರು: ನಗರಸಭೆ ಚುನಾವಣೆಯಲ್ಲಿ ಮತದಾರರನ್ನು ಜಾಗೃತಿಗೊಳಿಸಲು ತುಮಕೂರಿನ ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆ ಪ್ರಕಟಿಸಿರುವ ವಿಶಿಷ್ಟ ಆಲೋಚನೆಗೆ ಪ್ರಚೋದಿಸುವಂತಹ ಕರಪತ್ರವನ್ನು ನಗರಸಭೆಯ ಕಾರ್ಯಸ್ಥಾನವಾದ ಶ್ರೀ ಕೃಷ್ಣರಾಜೇಂದ್ರ ಪುರಭವನದ ಮುಂದೆ ದಿನಾಂಕ : ೨೨-೦೯-೨೦೦೭ ರಂದು ನಡೆದ ಸಮಾರಂಭದಲ್ಲಿ ಇಬ್ಬರು ಶ್ರೀಸಾಮಾನ್ಯ ವ್ಯಕ್ತಿಗಳಿಂದ ಬಿಡುಗಡೆಗೊಳಿಸುವ ಮೂಲಕ ಜನ ಜಾಗೃತಿಗೆ ಅರ್ಥಪೂರ್ಣ ಚಾಲನೆ ನೀಡಲಾಯಿತು. ಮತದಾರರು ಜಾಗೃತರಾಗಬೇಕು. ತಪ್ಪದೇ ಮತಚಲಾಯಿಸಬೇಕು. ಆಸೆ ಆಮಿಷಗಳಿಗೆ ಬಲಿಯಾಗದೆ ಯೋಗ್ಯರನ್ನು ಚುನಾಯಿಸಬೇಕು ಎಂಬ ಆಶಯ ಹೊತ್ತಿರುವ ಈ ಕರಪತ್ರವನ್ನು ಆಟೋ ಚಾಲಕರಾದ ಇಂತಿಯಾಜ್ ಪಾಷ ಮತ್ತು ಹಮಾಲಿ ಕೆಲಸ ಮಾಡುವ ಕಾಶಿ ಬಿಡುಗಡೆಗೊಳಿಸಿ, ಮತದಾತನಾದ ಶ್ರೀಸಾಮಾನ್ಯನಿಗಿರುವ ಮಹತ್ವವನ್ನು ಸಾಂಕೇತಿಕವಾಗಿ ಪ್ರತಿಬಿಂಬಿಸಿದರು. ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆಯ ವ್ಯವಸ್ಥಾಪಕ ಆರ್.ವಿಶ್ವನಾಥನ್ ಈ ಕರಪತ್ರದ ಉದ್ದೇಶವನ್ನು ವಿವರಿಸಿದರು. ಉದ್ಯಮಿ ಗೌ.ತಿ.ರಂಗನಾಥ್, ಪತ್ರಕರ್ತ ಆರ್.ಎಸ್.ಅಯ್ಯರ್, ಗುತ್ತಿಗೆದಾರರಾದ ಎಚ್.ಎನ್.ಸತೀಶ್ ಮತ್ತು ಬಿ.ಎಸ್.ಪ್ರಕಾಶ್ ಮೊದಲಾದ ಗಣ್ಯ ನಾಗರಿಕರು ಈ ಸಂದರ್ಭದಲ್ಲಿ ಹಾಜರಿದ್ದರು. ವಕೀಲ ಎಸ್.ರಮೇಶ್ ಮಾತನಾಡಿ, ಇದೊಂದು ಅರ್ಥಪೂರ್ಣ ಹಾಗೂ ಅಪೂರ್ವ ಕಾರ್ಯಕ್ರಮವಾಗಿದ್ದು, ಶ್ರೀಸಾಮಾನ್ಯ ವ್ಯಕ್ತಿಗಳೇ ಈ ಕಾರ್ಯಕ್ರಮದಲ್ಲಿ ಗಣ್ಯರೆನಿಸಿದ್ದಾರೆ. ಇದು ನೈಜ ಪ್ರಜಾಪ್ರಭುತ್ವದ ಆಶಯವಾಗಿದೆ. ಪ್ರಸ್ತುತ ನಗರಸಭೆ ಚುನಾವಣೆಯಲ್ಲಿ ಮತದಾರರು ಜಾಗೃತರಾಗಿ, ಮತಚಲಾಯಿಸಬೇಕು. ಈ ನಿಟ್ಟಿನಲ್ಲಿ ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆಯು ಮಾದರಿಯಾದ ಕಾರ್ಯಕ್ರಮವನ್ನು ಕೈಗೊಂಡಿದೆ ಎಂದು ತಿಳಿಸಿದರು.
ಕರಪತ್ರದಲ್ಲಿ ಏನಿದೆ?:- ನಿಮ್ಮಿಂದ ಆರಿಸಿ ಹೋಗುವ ಅಭ್ಯರ್ಥಿ ನಗರಸಭೆಯಲ್ಲಿ ಯಾರಿಗೂ ಹಾಗೂ ಯಾವುದಕ್ಕೂ ಶರಣಾಗದೆ ನಿರ್ಭೀತಿಯಿಂದ, ನಿಷ್ಪಕ್ಷಪಾತವಾಗಿ ಹಾಗೂ ನಿರ್ದಾಕ್ಷಿಣ್ಯದಿಂದ ಮಾತನಾಡುವ ಮತ್ತು ಕೆಲಸ ಮಾಡುವ ಶಕ್ತಿ ಹೊಂದಿದ್ದಾರೆಯೇ? ಎಂಬ ಪ್ರಧಾನ ಪ್ರಶ್ನೆಯ ಜೊತೆಗೆ ಅಭ್ಯರ್ಥಿಗೆ ನಿಮ್ಮ ಪ್ರತಿನಿಧಿಯಾಗುವ ಅರ್ಹತೆ, ಸಾಮರ್ಥ್ಯ ಇದೆಯೇ? ಅಧ್ಯರ್ಥಿಯ ಉದ್ಯೋಗ, ವಿದ್ಯಾರ್ಹತೆ, ಹಿನ್ನೆಲೆ, ಚಟುವಟಿಕೆಗಳೇನು? ಎಂಬ ಸಂಗತಿಗಳ ಬಗ್ಗೆ ಮತದಾರರು ಆಲೋಚಿಸುವಂತೆ ಈ ಕರಪತ್ರದಲ್ಲಿ ಕೋರಲಾಗಿದೆ. ಭವಿಷ್ಯದಲ್ಲಿ ಪಶ್ಚಾತ್ತಾಪ ಪಡುವ ಬದಲು ಈಗಲೇ ಮುನ್ನೆಚ್ಚರಿಕೆ ವಹಿಸಿ ಅಭ್ಯರ್ಥಿಗಳ ಜಾತಿ, ಪಕ್ಷಕ್ಕಿಂತ ಆತನ ಗುಣಲಕ್ಷಣಗಳನ್ನು ಪರಿಶೀಲಿಸಿ ಜನಪರವಾಗಿ, ನಿರ್ವಂಚನೆಯಿಂದ ಶ್ರಮಿಸುವ ಜವಾಬ್ದಾರಿಯುತ ನಡವಳಿಕೆಯುಳ್ಳ ಹಾಗೂ ಭರವಸೆಯ ಲಕ್ಷಣಗಳುಳ್ಳ ಯೋಗ್ಯ ಅಭ್ಯರ್ಥಿಗಳನ್ನು ಗುರುತಿಸಿ, ಮತನೀಡಿ ಎಂದು ಕರಪತ್ರದಲ್ಲಿ ವಿನಂತಿಸಲಾಗಿದೆ. ಇದಲ್ಲದೆ ನಾಡಿನ ಹೆಸರಾಂತ ಸಾಹಿತಿಗಳಾದ ಡಾ ಡಿ.ವಿ.ಗುಂಡಪ್ಪ, ಡಾ ಶಿವರಾಮಕಾರಂತ, ಡಾ ಹಾ.ಮ.ನಾಯಕ್, ನಿವೃತ್ತ ನ್ಯಾಯಾಧೀಶರಾದ ಡಾ ಎಂ.ರಾಮಾಜೋಯಿಸ್, ಪತ್ರಕರ್ತ ವಿಶ್ವೇಶ್ವರ ಭಟ್ ಅವರ ಚಿಂತನೆಗಳನ್ನು ಮುದ್ರಿಸಲಾಗಿದ್ದು, ಈ ಕರಪತ್ರ ಮತದಾರರನ್ನು ಕ್ಷಣಕಾಲವಾದರೂ ಆಲೋಚನೆಗೆ ಪ್ರಚೋದಿಸುವಂತಿದೆ.

No comments: