Tuesday, December 2, 2008

ಅಭಿವೃದ್ಧಿಯ ಸಫಲತೆಗೆ ಮಾಹಿತಿ ಹಕ್ಕು ಪೂರಕ

ಮಾಹಿತಿ ಮತ್ತು ಅಭಿವೃದ್ಧಿ ಎಂಬುದು ಒಂದಕ್ಕೊಂದು ಪೂರಕವಾಗಿದ್ದು, ಅಭಿವೃದ್ಧಿ ಯೋಜನೆಗಳ ಸಫಲತೆಗೆ, ಪ್ರಜಾಪ್ರಭುತ್ವದ ಯಶಸ್ಸಿಗೆ ಹಾಗೂ ಸಂವಿಧಾನದ ಆಶೋತ್ತರಗಳ ಈಡೇರಿಕೆಗೆ ಮಾಹಿತಿ ಹಕ್ಕು ಕಾಯ್ದೆಯು ಒಂದು ಪ್ರಮುಖ ಸಾಧನವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಪಿ. ಕೃಷ್ಣಭಟ್ ಅವರು ಬಲವಾಗಿ ಪ್ರತಿಪಾದಿಸಿದರು. ಅವರು ದಿನಾಂಕ: ೦೯-೦೯-೨೦೦೭ ರಂದು ತುಮಕೂರು ನಗರದ

ಶ್ರೀ ಕೃಷ್ಣ ಕಾನೂನು ಕಾಲೇಜಿನಲ್ಲಿ ಶ್ರೀ ಕೃಷ್ಣ ವಿದ್ಯಾಸಂಸ್ಥೆ ಮತ್ತು ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಏರ್ಪಟ್ಟಿದ್ದ “ ಮಾಹಿತಿ ಹಕ್ಕು ಕಾಯ್ದೆ ಮತ್ತು ವಿದ್ಯಾರ್ಥಿಗಳ ಪಾತ್ರ “ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪ್ರಜಾಪ್ರಭ್ಯುತ್ವ ಹಾಗೂ ಅಭಿವೃದ್ಧಿಗೆ ರಹಸ್ಯ ಎಂಬುದು ಬದ್ಧ ವೈರಿಯಾಗಿದೆ ಎಂದು ಬಣ್ಣಿಸಿದ ಅವರು, ಆಡಳಿತದಲ್ಲಿ ಈ ಹಿಂದೆ ಜಾರಿಯಲ್ಲಿದ್ದ ರಹಸ್ಯ ಕಾಯ್ದೆಯಿಂದ ಆರಂಭಿಸಿ, ಇಂದು ಯಾವುದೇ ಮಾಹಿತಿಯನ್ನು ಪಡೆಯಬಹುದಾದ ಮಾಹಿತಿ ಹಕ್ಕು ಕಾಯ್ದೆಯವರೆಗಿನ ಹಾದಿ ಅತ್ಯಂತ ದುರ್ಗಮವಾಗಿತ್ತು. ಆದರೆ ಅನೇಕ ಮಂದಿ ನಿಸ್ವಾರ್ಥ ಹಾಗೂ ಅಭಿವೃದ್ಧಿಪರ ಹೋರಾಟಗಾರರ ನಿರಂತರ ಪ್ರಯತ್ನಗಳಿಂದ ಇಂದು ನಾವು ಈ ಮಾಹಿತಿ ಯುಗವನ್ನು ಪ್ರವೇಶಿಸಿದ್ದೇವೆ ಎಂದರು. ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ನಂತರ ಆಡಳಿತಗಾರರ ಚರ್ಮ ಬದಲಾಯಿತೇ ವಿನಃ, ಮನೋಭಾವ ಮಾತ್ರ ಬದಲಾಗಲಿಲ್ಲ. ಆದರೆ ಸ್ವಾತಂತ್ರ್ಯ ದೊರೆತ ೬೦ ವರ್ಷಗಳ ನಂತರವಾದರೂ ಮಾಹಿತಿ ಪಡೆಯುವ ಸ್ವಾತಂತ್ರ್ಯ ದೊರೆತಿರುವುದು ಸಂತಸದ ವಿಷಯವಾಗಿದೆ. ಪ್ರಜೆಗಳಿಂದ, ಪ್ರಜೆಗಳಿಗಾಗಿ ಹಾಗೂ ಪ್ರಜೆಗಳಿಗೋಸ್ಕರ ಎಂಬ ಪ್ರಜಾಪ್ರಭುತ್ವದ ಆಶಯ ಈಗ ಈಡೇರಿದೆ ಎಂದು ಕೃಷ್ಣಭಟ್ ಅವರು ವಿಮರ್ಶಿಸಿದರು. ಅಭಿವೃದ್ಧಿಯ ಹಣವೆಲ್ಲ ಗುಳುಂ ಆಗಿಬಿಟ್ಟರೆ ಗತಿಯೇನು ? :- ಕಾರ್ಯಾಗಾರವನ್ನು ನಡೆಸಿಕೊಟ್ಟ ಬೆಂಗಳೂರಿನ ಕ್ರಿಯೇಟ್ ಸಂಸ್ಥೆಯ ಮುಖ್ಯಸ್ಥರಾದ ವೈ.ಜಿ. ಮುರಳೀಧರನ್ ಅವರು ಮಾತನಾಡಿ, ಸರ್ಕಾರದಿಂದ ಮಂಜೂರಾದ ಹಣವೆಲ್ಲ ಅಭಿವೃದ್ಧಿ ಯೋಜನೆಗೆ ಬಳಕೆಯಾಗದೆ, ಭ್ರಷ್ಟಾಚಾರದಲ್ಲೇ ಕರಗಿ ಹೋದರೆ, ಅಭಿವೃದ್ಧಿ ಯೋಜನೆ ಹೇಗೆ ಸಾಧ್ಯ ಎಂಬುದನ್ನು ವಿದ್ಯಾರ್ಥಿಗಳೂ ಸೇರಿದಂತೆ ಎಲ್ಲ ನಾಗರಿಕರೂ ಚಿಂತನೆ ನಡೆಸಿ, ಮಾಹಿತಿ ಹಕ್ಕು ಕಾಯ್ದೆಯನ್ನು ಬಳಸಿಕೊಳ್ಳಬೇಕೆಂದು ಕರೆ ನೀಡಿದರು. ಅಮೆರಿಕ ಗಗನ ನೌಕೆ ಕೊಲಂಬಿಯಾ ದುರ್ಘಟನೆಯಲ್ಲಿ ಕಲ್ಪನಾ ಚಾವ್ಲಾ ಸೇರಿದಂತೆ ಹಲವರು ಮೃತಪಟ್ಟಾಗ, ಇಂಗ್ಲೆಂಡಿನ ಬಿ.ಬಿ.ಸಿ. ಸಂಸ್ಥೆಯು ಅಲ್ಲಿನ ಮಾಹಿತಿ ಕಾಯ್ದೆ ಬಳಸಿಕೊಂಡು ಅಮೆರಿಕಾದ ನಾಸಾ ಸಂಸ್ಥೆಯನ್ನು ಪ್ರಶ್ನಿಸುವ ಮೂಲಕ ಹಲವಾರು ಅಂಶಗಳನ್ನು ಬೆಳಕಿಗೆ ತಂದಪ್ರಸಂಗವನ್ನು ಉದಾಹರಿಸಿ, ಆಡಳಿತದ ಎಲ್ಲ ಹಂತದಲ್ಲಿ ಪಾರದರ್ಶಕತೆ, ನೈತಿಕತೆ, ಜವಾಬ್ದಾರಿ ಉಂಟು ಮಾಡಲು ಭಾವಿ ಪ್ರಜೆಗಳಾದ ವಿದ್ಯಾರ್ಥಿಗಳು ಈ ಹಕ್ಕನ್ನು ಚಲಾಯಿಸಲು ವಿನಂತಿಸಿದರು. ವಿದ್ಯಾಸಂಸ್ಥೆಯ ಕಾರ್ಯದರ್ಶಿ ಮರಿಚೆನ್ನಮ್ಮ ಅವರು ಅಧ್ಯಕ್ಷತೆ ವಹಿಸಿದ್ದರು. ಕಾನೂನು ಕಾಲೇಜಿನ ಪ್ರಾಚಾರ್ಯ ಎಸ್. ರಮೇಶ್, ವಿದ್ಯಾಸಂಸ್ಥೆಯ ನಿರ್ದೇಶಕಿ ವೀಣಾ, ಮತ್ತೋರ್ವ ಪ್ರಾಚಾರ್ಯ ನಾಗೇಶ್ ವೇದಿಕೆಯಲ್ಲಿದ್ದರು. ಟಿ.ಎಸ್.ಅನುಪಮ ಸ್ವಾಗತಿಸಿದರು. ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆಯ ವ್ಯವಸ್ಥಾಪಕ ಆರ್. ವಿಶ್ವನಾಥನ್ ವಂದಿಸಿ, ಮುರುಳಿ ಕಾರ್ಯಕ್ರಮ ನಿರೂಪಿಸಿದರು.

No comments: