Thursday, September 4, 2008


ಮಾಹಿತಿ ಹಕ್ಕು ಚಲಾಯಿಸಲು ಜನತೆಗೆ ಕರೆ

ತುಮಕೂರು: “ಪ್ರಜಾಪ್ರಭುತ್ವದ ಯಶಸ್ಸಿಗೆ ಹಾಗೂ ಆಡಳಿತದಲ್ಲಿಪಾರದರ್ಶಕತೆಗಾಗಿ ‘ ಮಾಹಿತಿ ಹಕ್ಕು ಎಂಬ ಪರಮಾಧಿಕಾರವನ್ನು ನಾಗರಿಕರು ನಿಸ್ಸಂಕೋಚವಾಗಿ ಚಲಾಯಿಸಬೇಕು ಎಂದು ಪತ್ರಕರ್ತ ಎಂ.ಎನ್.ಕೋಟೆನಾಗಭೂಷಣ್ ಅವರು ಕರೆ ನೀಡಿದರು.
ಮಾಹಿತಿ ಹಕ್ಕು ಕಾಯ್ದೆಯು ಜಾರಿಗೆ ಬಂದು ಒಂದು ವರ್ಷವಾದ ನೆನಪಿಗಾಗಿ ದಿನಾಂಕ 11-10-2006 ರಂದು ತುಮಕೂರು ನಗರದ ಬಾಸ್ ಟ್ಯುಟೋರಿಯಲ್ಸ್ ಸಭಾಂಗಣದಲ್ಲಿ “ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆಯು ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮುಖ್ಯ ಭಾಷಣ ಮಾಡುತ್ತಿದ್ದರು.
ಮಾಹಿತಿಯೊಂದನ್ನು ಪಡೆಯಲು ಓರ್ವ ಜನಪ್ರತಿನಿಧಿಗಿರುವಷ್ಟೇ ಅಧಿಕಾರವನ್ನು‌ಈ ಕಾಯ್ದೆಯು ಶ್ರೀಸಾಮಾನ್ಯನಿಗೂ ಒದಗಿಸಿಕೊಟ್ಟಿದೆ. ಲೋಕಸಭೆ, ವಿಧಾನಸಭೆಗೆ ಲಭ್ಯವಾಗಬಹುದಾದ ಮಾಹಿತಿಗಳು ಈ ಕಾಯ್ದೆಯ ಪರಿಣಾಮವಾಗಿ ಶ್ರೀಸಾಮಾನ್ಯನಿಗೂ ಸುಲಭವಾಗಿ ದೊರಕಲಿದೆ. ಕೇವಲ ಹತ್ತು ರೂ. ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸುವ ಮೂಲಕ ಬೇಕಾದ ಮಾಹಿತಿಯನ್ನು ನಿಗದಿತ ಹಣ ನೀಡಿ ಪಡೆದುಕೊಳ್ಳಬಹುದಾಗಿದೆ ಎಂದು ಕಾಯ್ದೆಯ ವೈಶಿಷ್ಟ್ಯವನ್ನು ಬಣ್ಣಿಸಿದರು.
ಅರ್ಜಿ ಸಲ್ಲಿಸಿದ 30 ದಿನಗಳಲ್ಲಿ ಸಂಬಂಧಿಸಿದವರು ಉತ್ತರ ನೀಡಬೇಕು. ಅರ್ಜಿ ಸ್ವೀಕರಿಸದಿದ್ದರೆ, ನಿರಾಕರಿಸಿದರೆ, ವಿಳಂಬ ಮಾಡಿದರೆ, ತಪ್ಪು ಮಾಹಿತಿ ನೀಡಿದರೆ, ಮಾಹಿತಿ ನೀಡಲು ತೊಂದರೆ ಕೊಟ್ಟರೆ, ಮಾಹಿತಿಯನ್ನು ನಾಶ ಮಾಡಿದರೆ, ಸಂಬಂಧಪಟ್ಟವರು ಕಾನೂನು ಕ್ರಮಕ್ಕೆ ಒಳಗಾಗಬೇಕಾಗುತ್ತದೆ. 30 ದಿನಗಳ ನಂತರವೂ ಉತ್ತರ ನೀಡದಿದ್ದರೆ, ಪ್ರತಿದಿನ 250 ರೂ. ಗಳಂತೆ ದಂಡ ವಿಧಿಸಿ, ಸಂಬಂಧಪಟ್ಟವರ ವೇತನದಿಂದ ಆ ಹಣವನ್ನು ಜಮಾ ಮಾಡಿಕೊಳ್ಳಬೇಕಾಗುತ್ತದೆ. ಅಲ್ಲದೆ ಅವರ ಸೇವಾ ದಾಖಲಾತಿಯಲ್ಲಿ ನಮೂದಾಗುತ್ತದೆ ಎಂದು ಕಾಯ್ದೆ ಬಗ್ಗೆ ವಿವರಿಸಿದರು.
ಈ ಕಾಯ್ದೆಯ ಪ್ರಕಾರ ಪ್ರತಿ ಇಲಾಖೆಯೂ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ ಯಾರೆಂಬ ಫಲಕವನ್ನು ಹಾಕಬೇಕು. ಆದರೆ ಜಿಲ್ಲೆಯಲ್ಲಿ ಇದು ಎಷ್ಟು ಜಾರಿಗೆ ಬಂದಿದೆ ಎಂಬುದು ಪ್ರಶ್ನಾರ್ಹವಾಗಿದೆ ಎಂದು ಹೇಳಿದರು.
ತುಮಕೂರು ನಗರಸಭೆಯು ತನ್ನ ಎಲ್ಲ ಕೆಲಸ ಕಾರ್ಯಗಳ ವಿವರವನ್ನು ವೆಬ್ ಸೈಟ್ ಮೂಲಕ ಸ್ಪಷ್ಟಪಡಿಸುತ್ತಿರುವುದು ಪ್ರಶಂಸಾರ್ಹವಾಗಿದೆ ಎಂದ ಕೋಟೆ ನಾಗಭೂಷಣ್ ಅವರು, ಈ ಕೆಲಸವನ್ನು ಇನ್ನೂ ಸಹ ಜಿಲ್ಲಾಡಳಿತ ಮಾಡಿಲ್ಲ ಎಂದು ಟೀಕಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಪುರಸಭಾಧ್ಯಕ್ಷ ಕೆ.ಎನ್.ವೆಂಕಟಾಚಲಪತಿ (ಚಲಿ) ಅವರು ಮಾತನಾಡಿ, ಭ್ರಷ್ಟಾಚಾರ ನಿಯಂತ್ರಿಸಲು ಈ ಕಾಯ್ದೆ ಪ್ರಬಲ ಅಸ್ತ್ರವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಜೇಸೀಸ್ ವಲಯಾಧ್ಯಕ್ಷ ಭರತ್ ಕುಮಾರ್ ಜೈನ್ ಅವರು, ಈ ಕಾಯ್ದೆಯ ಮೂಲಕ ನೈಜ ಪ್ರಜಾಪ್ರಭುತ್ವ ಜಾರಿಗೆ ಬರುತ್ತಿದೆ ಎಂದು ಅಭಿಪ್ರಾಯಪಟ್ಟರು. ಸರಸ್ ವ್ಯವಸ್ಥಾಪಕ ಆರ್.ವಿಶ್ವನಾಥನ್ ಸ್ವಾಗತಿಸಿದರು. ಪತ್ರಕರ್ತ ಆರ್.ಎಸ್.ಅಯ್ಯರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು. ಟಿ.ಜಿ.ವೇದಮೂರ್ತಿ ವಂದಿಸಿದರು. ಕಾರ್ಯಕ್ರಮದಲ್ಲಿ ಮಾಜಿ ನಗರಸಭಾಧ್ಯಕ್ಷ ಆರ್.ಎನ್. ಸತ್ಯನಾರಾಯಣ, ನಗರಸಭಾ ಸದಸ್ಯರಾದ ಡಿ.ಆರ್.ಬಸವರಾಜು ಮತ್ತು ಪಿ.ಎಸ್.ರಮೇಶ್, ಮಾಜಿ ಸಿಂಡಿಕೇಟ್ ಸದಸ್ಯ ಕೆ. ನಯಾಜ್ ಅಹಮದ್, ಪತ್ರಕರ್ತ ಎಚ್.ಎಸ್. ರಾಮಣ್ಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

No comments: