14.07.2008
ಆರೋಗ್ಯವೃದ್ಧಿಗೆ ಪ್ರಾಣಿಕ್ ಹೀಲಿಂಗ್ ಸಹಕಾರಿ
ತುಮಕೂರು: ವ್ಯಕ್ತಿಯು ತನ್ನ ಸ್ವಾಸ್ಥ್ಯ ರಕ್ಷಣೆಯೊಂದಿಗೆ ತನ್ನಲ್ಲಡಗಿರುವ ಸಾಮರ್ಥ್ಯವನ್ನು ವೃದ್ಧಿಪಡಿಸಿಕೊಳ್ಳಲು ಸಹಾ ಪ್ರಾಣಿಕ್ ಹೀಲಿಂಗ್ ಚಿಕಿತ್ಸಾ ಪದ್ಧತಿಯು ಮಹತ್ವದ ಪರಿಣಾಮ ಬೀರುವುದು ಎಂದು ಮೈಸೂರಿನ ಯೋಗವಿದ್ಯಾ ಪ್ರಾಣ ಚಿಕಿತ್ಸಕಿ ಸಿ.ಆರ್.ಜಯಶ್ರೀ ಅವರು ಅಭಿಪ್ರಾಯಪಟ್ಟರು. ಅವರು ದಿನಾಂಕ: ೧೪.೦೭.೨೦೦೮ ರಂದು ತುಮಕೂರು ನಗರದ ಪ್ರಹ್ಲಾದರಾವ್ ಪಾರ್ಕ್‌ನಲ್ಲಿ ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆಯ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ “ಪ್ರಾಣಿಕ್ ಹೀಲಿಂಗ್ ಚಿಕಿತ್ಸಾ ಪದ್ಧತಿಯ ಬಗ್ಗೆ ವಿಶೇಷ ಉಪನ್ಯಾಸ ನೀಡುತ್ತಿದ್ದರು. ಪ್ರಾಣಿಕ್ ಹೀಲಿಂಗ್ ಇತರೆ ಯಾವುದೇ ವೈದ್ಯ ಪದ್ಧತಿಗೆ ವಿರುದ್ಧವಾದುದಲ್ಲ. ಇದು ಎಲ್ಲ ಚಿಕಿತ್ಸೆಗಳಿಗೂ ಪೂರಕವಾದುದು ಹಾಗೂ ಮುಂಜಾಗ್ರತಾ ಕ್ರಮವಾಗಿದೆ. ಯಾವುದೇ ಔಷಧಿಯಿಲ್ಲದೆ ರೋಗಗಳನ್ನು ಗುಣಪಡಿಸಿಕೊಳ್ಳಲು ಸಹಕಾರಿಯಾದ ಒಂದು ವಿಧಾನವಾಗಿ ಇದು ಜನಪ್ರಿಯವಾಗಿದೆ. ಇಂದು ಇದನ್ನು ಮನೆ-ಮನೆಗಳಲ್ಲೂ, ಹಿರಿಯರು-ಕಿರಿಯರು, ಸ್ತ್ರೀ-ಪುರುಷರೆಂಬ ಭೇದವಿಲ್ಲದಂತೆ ಎಲ್ಲರೂ ಕಲಿಯುವ ಅಗತ್ಯವಿದೆ. ಇದರ ಬಗ್ಗೆ ಅರಿವಿದ್ದರೆ ಅದೆಷ್ಟೋ ರೋಗಗಳಿಗೆ ಸುಲಭವಾಗಿ ನಿವಾರಣೆಯನ್ನು ಕಾಣಬಹುದು ಎಂದು ಉದಾಹರಣೆಗಳೊಂದಿಗೆ ಹೇಳಿದರು. ಮನುಷ್ಯನ ಭೌತಿಕ ಶರೀರದ ಹೊರಭಾಗದಲ್ಲಿ ಕವಚದೋಪಾದಿಯಲ್ಲಿ ಸೂಕ್ಷ್ಮ ಶರೀರವೂ ಇದೆ. ಈ ಸೂಕ್ಷ್ಮ ಶರೀರದಲ್ಲಿ ಉಂಟಾಗುವ ಲೋಪದೋಷಗಳಿಂದಲೇ ಭೌತಿಕ ಶರೀರದಲ್ಲಿ ರೋಗಗಳು ಕಾಣಿಸಿಕೊಳ್ಳುತ್ತವೆ. ಇಂತಹ ಲೋಪಗಳನ್ನು ಸರಿಪಡಿಸುವುದೇ ಪ್ರಾಣಿಕ್ ಹೀಲಿಂಗ್‌ನ ವೈಶಿಷ್ಟ್ಯವಾಗಿದೆ. ಇದೇನೂ ಹೊಸದಲ್ಲ. ಇದು ಭಾರತದ ಪ್ರಾಚೀನ ವಿದ್ಯೆಗಳಲ್ಲೊಂದಾಗಿದೆ. ಮನುಷ್ಯನ ಶರೀರವು ಅನ್ನಮಯ, ಪ್ರಾಣಮಯ ಹಾಗೂ ವಿಜ್ಞಾನಮಯ ಕೋಶಗಳಿಂದ ಕೂಡಿದೆಯೆಂದು ಋಗ್ವೇದದಲ್ಲಿ ವರ್ಣಿಸಿರುವುದನ್ನು ಕಾಣಬಹುದು. ಫಿಲಿಫೈನ್ಸ್‌ನ ರಾಸಾಯನಿಕ ಶಾಸ್ತ್ರಜ್ಞ ಮಾಸ್ಟರ್ ಚೋಕೋಕ್ ಸುಯಿ ಅವರು ಇದರ ಮಹತ್ವ ಅರಿತು, ಆಳವಾಗಿ ಸಂಶೋಧನೆ ಕೈಗೊಂಡು “ಪ್ರಾಣಿಕ್ ಹೀಲಿಂಗ್ ಎಂಬ ಹೆಸರಿನಿಂದ ಇಡೀ ಜಗತ್ತಿಗೆ ಪರಿಚಯಿಸಿದ್ದಾರೆ. ಅನೇಕ ಕಡೆಗಳಲ್ಲಿ ವೈದ್ಯರು ಸಹಾ ಇದನ್ನು ಕಲಿತು ಪ್ರಯೋಗಿಸುತ್ತಿದ್ದಾರೆ. ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆ ಮತ್ತು ಚೆನ್ನೈನ ಅಪೋಲೋ ಆಸ್ಪತ್ರೆಗಳಲ್ಲೂ “ಪ್ರಾಣಿಕ್ ಹೀಲಿಂಗ್ ಚಿಕಿತ್ಸೆಯ ಪ್ರತ್ಯೇಕ ವಿಭಾಗವಿರುವುದು ಇದರ ಮಹತ್ವಕ್ಕೆ ಸಾಕ್ಷಿಯಾಗಿದೆ ಎಂದು ವಿವರಿಸಿದರು. ರೋಚಕ ಪ್ರಾತ್ಯಕ್ಷತೆ: ಇದೇ ಸಂದರ್ಭದಲ್ಲಿ ಜಯಶ್ರೀ ಮತ್ತು ಸಂಗಡಿಗರು “ಪ್ರಾಣಿಕ್ ಹೀಲಿಂಗ್ನ ಪ್ರಾತ್ಯಕ್ಷತೆಯನ್ನು ನಡೆಸಿಕೊಟ್ಟರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ವಿ.ಮಹದೇವಯ್ಯ ಸೇರಿದಂತೆ ಅನೇಕ ಸಭಿಕರು ವೇದಿಕೆಯಲ್ಲೇ ಚಿಕಿತ್ಸೆಗೆ ಒಳಗಾಗಿ, ದೀರ್ಘಕಾಲೀನ ನೋವಿಗೆ ಸ್ಥಳದಲ್ಲೇ ನಿವಾರಣೆಯ ರೋಚಕ ಅನುಭವದಿಂದ ಆನಂದಿಸಿದರು. ನಂತರ ಸಿ.ವಿ.ಮಹದೇವಯ್ಯ ಮತ್ತು ಮುಖ್ಯ ಅತಿಥಿ ಕೆನರಾ ಬ್ಯಾಂಕ್ ಸೋಮೇಶ್ವರ ಪುರಂ ಶಾಖಾ ವ್ಯವಸ್ಥಾಪಕ ಕೆ.ಜಿ. ನಂಜುಂಡೇಶ್ವರ್ ಅವರು ಮಾತನಾಡುತ್ತಾ, ಭಾರತದ ಅನೇಕ ಪ್ರಾಚೀನ ವಿದ್ಯೆಗಳು ಮನುಷ್ಯನ ದೇಹಾರೋಗ್ಯ ಕಾಪಾಡಲು ಸಹಕಾರಿಯಾಗಿದ್ದು, ಅದರಲ್ಲಿ ಪ್ರಾಣಿಕ್ ಹೀಲಿಂಗ್ ಸಹಾ ಒಂದಾಗಿದೆ. ಇಂದಿನ ವಾತಾವರಣದಲ್ಲಿ ಎಲ್ಲರೂ ಇದನ್ನು ಕಲಿಯಬೇಕಾಗಿದೆ ಎಂದರು. ಸರಸ್ ಸಂಸ್ಥೆಯ ವ್ಯವಸ್ಥಾಪಕ ಆರ್.ವಿಶ್ವನಾಥನ್ ಸ್ವಾಗತಿಸಿದರು. ಪತ್ರಕರ್ತ ಆರ್.ಎಸ್.ಅಯ್ಯರ್ ವಂದಿಸಿದರು
No comments:
Post a Comment