Saturday, December 6, 2008


14.07.2008

ಆರೋಗ್ಯವೃದ್ಧಿಗೆ ಪ್ರಾಣಿಕ್ ಹೀಲಿಂಗ್ ಸಹಕಾರಿ

ತುಮಕೂರು: ವ್ಯಕ್ತಿಯು ತನ್ನ ಸ್ವಾಸ್ಥ್ಯ ರಕ್ಷಣೆಯೊಂದಿಗೆ ತನ್ನಲ್ಲಡಗಿರುವ ಸಾಮರ್ಥ್ಯವನ್ನು ವೃದ್ಧಿಪಡಿಸಿಕೊಳ್ಳಲು ಸಹಾ ಪ್ರಾಣಿಕ್ ಹೀಲಿಂಗ್ ಚಿಕಿತ್ಸಾ ಪದ್ಧತಿಯು ಮಹತ್ವದ ಪರಿಣಾಮ ಬೀರುವುದು ಎಂದು ಮೈಸೂರಿನ ಯೋಗವಿದ್ಯಾ ಪ್ರಾಣ ಚಿಕಿತ್ಸಕಿ ಸಿ.ಆರ್.ಜಯಶ್ರೀ ಅವರು ಅಭಿಪ್ರಾಯಪಟ್ಟರು. ಅವರು ದಿನಾಂಕ: ೧೪.೦೭.೨೦೦೮ ರಂದು ತುಮಕೂರು ನಗರದ ಪ್ರಹ್ಲಾದರಾವ್ ಪಾರ್ಕ್‌ನಲ್ಲಿ ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆಯ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ “ಪ್ರಾಣಿಕ್ ಹೀಲಿಂಗ್ ಚಿಕಿತ್ಸಾ ಪದ್ಧತಿಯ ಬಗ್ಗೆ ವಿಶೇಷ ಉಪನ್ಯಾಸ ನೀಡುತ್ತಿದ್ದರು. ಪ್ರಾಣಿಕ್ ಹೀಲಿಂಗ್ ಇತರೆ ಯಾವುದೇ ವೈದ್ಯ ಪದ್ಧತಿಗೆ ವಿರುದ್ಧವಾದುದಲ್ಲ. ಇದು ಎಲ್ಲ ಚಿಕಿತ್ಸೆಗಳಿಗೂ ಪೂರಕವಾದುದು ಹಾಗೂ ಮುಂಜಾಗ್ರತಾ ಕ್ರಮವಾಗಿದೆ. ಯಾವುದೇ ಔಷಧಿಯಿಲ್ಲದೆ ರೋಗಗಳನ್ನು ಗುಣಪಡಿಸಿಕೊಳ್ಳಲು ಸಹಕಾರಿಯಾದ ಒಂದು ವಿಧಾನವಾಗಿ ಇದು ಜನಪ್ರಿಯವಾಗಿದೆ. ಇಂದು ಇದನ್ನು ಮನೆ-ಮನೆಗಳಲ್ಲೂ, ಹಿರಿಯರು-ಕಿರಿಯರು, ಸ್ತ್ರೀ-ಪುರುಷರೆಂಬ ಭೇದವಿಲ್ಲದಂತೆ ಎಲ್ಲರೂ ಕಲಿಯುವ ಅಗತ್ಯವಿದೆ. ಇದರ ಬಗ್ಗೆ ಅರಿವಿದ್ದರೆ ಅದೆಷ್ಟೋ ರೋಗಗಳಿಗೆ ಸುಲಭವಾಗಿ ನಿವಾರಣೆಯನ್ನು ಕಾಣಬಹುದು ಎಂದು ಉದಾಹರಣೆಗಳೊಂದಿಗೆ ಹೇಳಿದರು. ಮನುಷ್ಯನ ಭೌತಿಕ ಶರೀರದ ಹೊರಭಾಗದಲ್ಲಿ ಕವಚದೋಪಾದಿಯಲ್ಲಿ ಸೂಕ್ಷ್ಮ ಶರೀರವೂ ಇದೆ. ಈ ಸೂಕ್ಷ್ಮ ಶರೀರದಲ್ಲಿ ಉಂಟಾಗುವ ಲೋಪದೋಷಗಳಿಂದಲೇ ಭೌತಿಕ ಶರೀರದಲ್ಲಿ ರೋಗಗಳು ಕಾಣಿಸಿಕೊಳ್ಳುತ್ತವೆ. ಇಂತಹ ಲೋಪಗಳನ್ನು ಸರಿಪಡಿಸುವುದೇ ಪ್ರಾಣಿಕ್ ಹೀಲಿಂಗ್‌ನ ವೈಶಿಷ್ಟ್ಯವಾಗಿದೆ. ಇದೇನೂ ಹೊಸದಲ್ಲ. ಇದು ಭಾರತದ ಪ್ರಾಚೀನ ವಿದ್ಯೆಗಳಲ್ಲೊಂದಾಗಿದೆ. ಮನುಷ್ಯನ ಶರೀರವು ಅನ್ನಮಯ, ಪ್ರಾಣಮಯ ಹಾಗೂ ವಿಜ್ಞಾನಮಯ ಕೋಶಗಳಿಂದ ಕೂಡಿದೆಯೆಂದು ಋಗ್ವೇದದಲ್ಲಿ ವರ್ಣಿಸಿರುವುದನ್ನು ಕಾಣಬಹುದು. ಫಿಲಿಫೈನ್ಸ್‌ನ ರಾಸಾಯನಿಕ ಶಾಸ್ತ್ರಜ್ಞ ಮಾಸ್ಟರ್ ಚೋಕೋಕ್ ಸುಯಿ ಅವರು ಇದರ ಮಹತ್ವ ಅರಿತು, ಆಳವಾಗಿ ಸಂಶೋಧನೆ ಕೈಗೊಂಡು “ಪ್ರಾಣಿಕ್ ಹೀಲಿಂಗ್ ಎಂಬ ಹೆಸರಿನಿಂದ ಇಡೀ ಜಗತ್ತಿಗೆ ಪರಿಚಯಿಸಿದ್ದಾರೆ. ಅನೇಕ ಕಡೆಗಳಲ್ಲಿ ವೈದ್ಯರು ಸಹಾ ಇದನ್ನು ಕಲಿತು ಪ್ರಯೋಗಿಸುತ್ತಿದ್ದಾರೆ. ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆ ಮತ್ತು ಚೆನ್ನೈನ ಅಪೋಲೋ ಆಸ್ಪತ್ರೆಗಳಲ್ಲೂ “ಪ್ರಾಣಿಕ್ ಹೀಲಿಂಗ್ ಚಿಕಿತ್ಸೆಯ ಪ್ರತ್ಯೇಕ ವಿಭಾಗವಿರುವುದು ಇದರ ಮಹತ್ವಕ್ಕೆ ಸಾಕ್ಷಿಯಾಗಿದೆ ಎಂದು ವಿವರಿಸಿದರು. ರೋಚಕ ಪ್ರಾತ್ಯಕ್ಷತೆ: ಇದೇ ಸಂದರ್ಭದಲ್ಲಿ ಜಯಶ್ರೀ ಮತ್ತು ಸಂಗಡಿಗರು “ಪ್ರಾಣಿಕ್ ಹೀಲಿಂಗ್ನ ಪ್ರಾತ್ಯಕ್ಷತೆಯನ್ನು ನಡೆಸಿಕೊಟ್ಟರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ವಿ.ಮಹದೇವಯ್ಯ ಸೇರಿದಂತೆ ಅನೇಕ ಸಭಿಕರು ವೇದಿಕೆಯಲ್ಲೇ ಚಿಕಿತ್ಸೆಗೆ ಒಳಗಾಗಿ, ದೀರ್ಘಕಾಲೀನ ನೋವಿಗೆ ಸ್ಥಳದಲ್ಲೇ ನಿವಾರಣೆಯ ರೋಚಕ ಅನುಭವದಿಂದ ಆನಂದಿಸಿದರು. ನಂತರ ಸಿ.ವಿ.ಮಹದೇವಯ್ಯ ಮತ್ತು ಮುಖ್ಯ ಅತಿಥಿ ಕೆನರಾ ಬ್ಯಾಂಕ್ ಸೋಮೇಶ್ವರ ಪುರಂ ಶಾಖಾ ವ್ಯವಸ್ಥಾಪಕ ಕೆ.ಜಿ. ನಂಜುಂಡೇಶ್ವರ್ ಅವರು ಮಾತನಾಡುತ್ತಾ, ಭಾರತದ ಅನೇಕ ಪ್ರಾಚೀನ ವಿದ್ಯೆಗಳು ಮನುಷ್ಯನ ದೇಹಾರೋಗ್ಯ ಕಾಪಾಡಲು ಸಹಕಾರಿಯಾಗಿದ್ದು, ಅದರಲ್ಲಿ ಪ್ರಾಣಿಕ್ ಹೀಲಿಂಗ್ ಸಹಾ ಒಂದಾಗಿದೆ. ಇಂದಿನ ವಾತಾವರಣದಲ್ಲಿ ಎಲ್ಲರೂ ಇದನ್ನು ಕಲಿಯಬೇಕಾಗಿದೆ ಎಂದರು. ಸರಸ್ ಸಂಸ್ಥೆಯ ವ್ಯವಸ್ಥಾಪಕ ಆರ್.ವಿಶ್ವನಾಥನ್ ಸ್ವಾಗತಿಸಿದರು. ಪತ್ರಕರ್ತ ಆರ್.ಎಸ್.ಅಯ್ಯರ್ ವಂದಿಸಿದರು

Friday, December 5, 2008


Dated 22-09-2007
ಮತದಾರರನ್ನು ಜಾಗೃತಿಗೊಳಿಸಲು ಸರಸ್ ದಿಂದ ಕರಪತ್ರ ಬಿಡುಗಡೆ
ತುಮಕೂರು: ನಗರಸಭೆ ಚುನಾವಣೆಯಲ್ಲಿ ಮತದಾರರನ್ನು ಜಾಗೃತಿಗೊಳಿಸಲು ತುಮಕೂರಿನ ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆ ಪ್ರಕಟಿಸಿರುವ ವಿಶಿಷ್ಟ ಆಲೋಚನೆಗೆ ಪ್ರಚೋದಿಸುವಂತಹ ಕರಪತ್ರವನ್ನು ನಗರಸಭೆಯ ಕಾರ್ಯಸ್ಥಾನವಾದ ಶ್ರೀ ಕೃಷ್ಣರಾಜೇಂದ್ರ ಪುರಭವನದ ಮುಂದೆ ದಿನಾಂಕ : ೨೨-೦೯-೨೦೦೭ ರಂದು ನಡೆದ ಸಮಾರಂಭದಲ್ಲಿ ಇಬ್ಬರು ಶ್ರೀಸಾಮಾನ್ಯ ವ್ಯಕ್ತಿಗಳಿಂದ ಬಿಡುಗಡೆಗೊಳಿಸುವ ಮೂಲಕ ಜನ ಜಾಗೃತಿಗೆ ಅರ್ಥಪೂರ್ಣ ಚಾಲನೆ ನೀಡಲಾಯಿತು. ಮತದಾರರು ಜಾಗೃತರಾಗಬೇಕು. ತಪ್ಪದೇ ಮತಚಲಾಯಿಸಬೇಕು. ಆಸೆ ಆಮಿಷಗಳಿಗೆ ಬಲಿಯಾಗದೆ ಯೋಗ್ಯರನ್ನು ಚುನಾಯಿಸಬೇಕು ಎಂಬ ಆಶಯ ಹೊತ್ತಿರುವ ಈ ಕರಪತ್ರವನ್ನು ಆಟೋ ಚಾಲಕರಾದ ಇಂತಿಯಾಜ್ ಪಾಷ ಮತ್ತು ಹಮಾಲಿ ಕೆಲಸ ಮಾಡುವ ಕಾಶಿ ಬಿಡುಗಡೆಗೊಳಿಸಿ, ಮತದಾತನಾದ ಶ್ರೀಸಾಮಾನ್ಯನಿಗಿರುವ ಮಹತ್ವವನ್ನು ಸಾಂಕೇತಿಕವಾಗಿ ಪ್ರತಿಬಿಂಬಿಸಿದರು. ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆಯ ವ್ಯವಸ್ಥಾಪಕ ಆರ್.ವಿಶ್ವನಾಥನ್ ಈ ಕರಪತ್ರದ ಉದ್ದೇಶವನ್ನು ವಿವರಿಸಿದರು. ಉದ್ಯಮಿ ಗೌ.ತಿ.ರಂಗನಾಥ್, ಪತ್ರಕರ್ತ ಆರ್.ಎಸ್.ಅಯ್ಯರ್, ಗುತ್ತಿಗೆದಾರರಾದ ಎಚ್.ಎನ್.ಸತೀಶ್ ಮತ್ತು ಬಿ.ಎಸ್.ಪ್ರಕಾಶ್ ಮೊದಲಾದ ಗಣ್ಯ ನಾಗರಿಕರು ಈ ಸಂದರ್ಭದಲ್ಲಿ ಹಾಜರಿದ್ದರು. ವಕೀಲ ಎಸ್.ರಮೇಶ್ ಮಾತನಾಡಿ, ಇದೊಂದು ಅರ್ಥಪೂರ್ಣ ಹಾಗೂ ಅಪೂರ್ವ ಕಾರ್ಯಕ್ರಮವಾಗಿದ್ದು, ಶ್ರೀಸಾಮಾನ್ಯ ವ್ಯಕ್ತಿಗಳೇ ಈ ಕಾರ್ಯಕ್ರಮದಲ್ಲಿ ಗಣ್ಯರೆನಿಸಿದ್ದಾರೆ. ಇದು ನೈಜ ಪ್ರಜಾಪ್ರಭುತ್ವದ ಆಶಯವಾಗಿದೆ. ಪ್ರಸ್ತುತ ನಗರಸಭೆ ಚುನಾವಣೆಯಲ್ಲಿ ಮತದಾರರು ಜಾಗೃತರಾಗಿ, ಮತಚಲಾಯಿಸಬೇಕು. ಈ ನಿಟ್ಟಿನಲ್ಲಿ ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆಯು ಮಾದರಿಯಾದ ಕಾರ್ಯಕ್ರಮವನ್ನು ಕೈಗೊಂಡಿದೆ ಎಂದು ತಿಳಿಸಿದರು.
ಕರಪತ್ರದಲ್ಲಿ ಏನಿದೆ?:- ನಿಮ್ಮಿಂದ ಆರಿಸಿ ಹೋಗುವ ಅಭ್ಯರ್ಥಿ ನಗರಸಭೆಯಲ್ಲಿ ಯಾರಿಗೂ ಹಾಗೂ ಯಾವುದಕ್ಕೂ ಶರಣಾಗದೆ ನಿರ್ಭೀತಿಯಿಂದ, ನಿಷ್ಪಕ್ಷಪಾತವಾಗಿ ಹಾಗೂ ನಿರ್ದಾಕ್ಷಿಣ್ಯದಿಂದ ಮಾತನಾಡುವ ಮತ್ತು ಕೆಲಸ ಮಾಡುವ ಶಕ್ತಿ ಹೊಂದಿದ್ದಾರೆಯೇ? ಎಂಬ ಪ್ರಧಾನ ಪ್ರಶ್ನೆಯ ಜೊತೆಗೆ ಅಭ್ಯರ್ಥಿಗೆ ನಿಮ್ಮ ಪ್ರತಿನಿಧಿಯಾಗುವ ಅರ್ಹತೆ, ಸಾಮರ್ಥ್ಯ ಇದೆಯೇ? ಅಧ್ಯರ್ಥಿಯ ಉದ್ಯೋಗ, ವಿದ್ಯಾರ್ಹತೆ, ಹಿನ್ನೆಲೆ, ಚಟುವಟಿಕೆಗಳೇನು? ಎಂಬ ಸಂಗತಿಗಳ ಬಗ್ಗೆ ಮತದಾರರು ಆಲೋಚಿಸುವಂತೆ ಈ ಕರಪತ್ರದಲ್ಲಿ ಕೋರಲಾಗಿದೆ. ಭವಿಷ್ಯದಲ್ಲಿ ಪಶ್ಚಾತ್ತಾಪ ಪಡುವ ಬದಲು ಈಗಲೇ ಮುನ್ನೆಚ್ಚರಿಕೆ ವಹಿಸಿ ಅಭ್ಯರ್ಥಿಗಳ ಜಾತಿ, ಪಕ್ಷಕ್ಕಿಂತ ಆತನ ಗುಣಲಕ್ಷಣಗಳನ್ನು ಪರಿಶೀಲಿಸಿ ಜನಪರವಾಗಿ, ನಿರ್ವಂಚನೆಯಿಂದ ಶ್ರಮಿಸುವ ಜವಾಬ್ದಾರಿಯುತ ನಡವಳಿಕೆಯುಳ್ಳ ಹಾಗೂ ಭರವಸೆಯ ಲಕ್ಷಣಗಳುಳ್ಳ ಯೋಗ್ಯ ಅಭ್ಯರ್ಥಿಗಳನ್ನು ಗುರುತಿಸಿ, ಮತನೀಡಿ ಎಂದು ಕರಪತ್ರದಲ್ಲಿ ವಿನಂತಿಸಲಾಗಿದೆ. ಇದಲ್ಲದೆ ನಾಡಿನ ಹೆಸರಾಂತ ಸಾಹಿತಿಗಳಾದ ಡಾ ಡಿ.ವಿ.ಗುಂಡಪ್ಪ, ಡಾ ಶಿವರಾಮಕಾರಂತ, ಡಾ ಹಾ.ಮ.ನಾಯಕ್, ನಿವೃತ್ತ ನ್ಯಾಯಾಧೀಶರಾದ ಡಾ ಎಂ.ರಾಮಾಜೋಯಿಸ್, ಪತ್ರಕರ್ತ ವಿಶ್ವೇಶ್ವರ ಭಟ್ ಅವರ ಚಿಂತನೆಗಳನ್ನು ಮುದ್ರಿಸಲಾಗಿದ್ದು, ಈ ಕರಪತ್ರ ಮತದಾರರನ್ನು ಕ್ಷಣಕಾಲವಾದರೂ ಆಲೋಚನೆಗೆ ಪ್ರಚೋದಿಸುವಂತಿದೆ.

Tuesday, December 2, 2008

ಅಭಿವೃದ್ಧಿಯ ಸಫಲತೆಗೆ ಮಾಹಿತಿ ಹಕ್ಕು ಪೂರಕ

ಮಾಹಿತಿ ಮತ್ತು ಅಭಿವೃದ್ಧಿ ಎಂಬುದು ಒಂದಕ್ಕೊಂದು ಪೂರಕವಾಗಿದ್ದು, ಅಭಿವೃದ್ಧಿ ಯೋಜನೆಗಳ ಸಫಲತೆಗೆ, ಪ್ರಜಾಪ್ರಭುತ್ವದ ಯಶಸ್ಸಿಗೆ ಹಾಗೂ ಸಂವಿಧಾನದ ಆಶೋತ್ತರಗಳ ಈಡೇರಿಕೆಗೆ ಮಾಹಿತಿ ಹಕ್ಕು ಕಾಯ್ದೆಯು ಒಂದು ಪ್ರಮುಖ ಸಾಧನವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಪಿ. ಕೃಷ್ಣಭಟ್ ಅವರು ಬಲವಾಗಿ ಪ್ರತಿಪಾದಿಸಿದರು. ಅವರು ದಿನಾಂಕ: ೦೯-೦೯-೨೦೦೭ ರಂದು ತುಮಕೂರು ನಗರದ

ಶ್ರೀ ಕೃಷ್ಣ ಕಾನೂನು ಕಾಲೇಜಿನಲ್ಲಿ ಶ್ರೀ ಕೃಷ್ಣ ವಿದ್ಯಾಸಂಸ್ಥೆ ಮತ್ತು ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಏರ್ಪಟ್ಟಿದ್ದ “ ಮಾಹಿತಿ ಹಕ್ಕು ಕಾಯ್ದೆ ಮತ್ತು ವಿದ್ಯಾರ್ಥಿಗಳ ಪಾತ್ರ “ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪ್ರಜಾಪ್ರಭ್ಯುತ್ವ ಹಾಗೂ ಅಭಿವೃದ್ಧಿಗೆ ರಹಸ್ಯ ಎಂಬುದು ಬದ್ಧ ವೈರಿಯಾಗಿದೆ ಎಂದು ಬಣ್ಣಿಸಿದ ಅವರು, ಆಡಳಿತದಲ್ಲಿ ಈ ಹಿಂದೆ ಜಾರಿಯಲ್ಲಿದ್ದ ರಹಸ್ಯ ಕಾಯ್ದೆಯಿಂದ ಆರಂಭಿಸಿ, ಇಂದು ಯಾವುದೇ ಮಾಹಿತಿಯನ್ನು ಪಡೆಯಬಹುದಾದ ಮಾಹಿತಿ ಹಕ್ಕು ಕಾಯ್ದೆಯವರೆಗಿನ ಹಾದಿ ಅತ್ಯಂತ ದುರ್ಗಮವಾಗಿತ್ತು. ಆದರೆ ಅನೇಕ ಮಂದಿ ನಿಸ್ವಾರ್ಥ ಹಾಗೂ ಅಭಿವೃದ್ಧಿಪರ ಹೋರಾಟಗಾರರ ನಿರಂತರ ಪ್ರಯತ್ನಗಳಿಂದ ಇಂದು ನಾವು ಈ ಮಾಹಿತಿ ಯುಗವನ್ನು ಪ್ರವೇಶಿಸಿದ್ದೇವೆ ಎಂದರು. ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ನಂತರ ಆಡಳಿತಗಾರರ ಚರ್ಮ ಬದಲಾಯಿತೇ ವಿನಃ, ಮನೋಭಾವ ಮಾತ್ರ ಬದಲಾಗಲಿಲ್ಲ. ಆದರೆ ಸ್ವಾತಂತ್ರ್ಯ ದೊರೆತ ೬೦ ವರ್ಷಗಳ ನಂತರವಾದರೂ ಮಾಹಿತಿ ಪಡೆಯುವ ಸ್ವಾತಂತ್ರ್ಯ ದೊರೆತಿರುವುದು ಸಂತಸದ ವಿಷಯವಾಗಿದೆ. ಪ್ರಜೆಗಳಿಂದ, ಪ್ರಜೆಗಳಿಗಾಗಿ ಹಾಗೂ ಪ್ರಜೆಗಳಿಗೋಸ್ಕರ ಎಂಬ ಪ್ರಜಾಪ್ರಭುತ್ವದ ಆಶಯ ಈಗ ಈಡೇರಿದೆ ಎಂದು ಕೃಷ್ಣಭಟ್ ಅವರು ವಿಮರ್ಶಿಸಿದರು. ಅಭಿವೃದ್ಧಿಯ ಹಣವೆಲ್ಲ ಗುಳುಂ ಆಗಿಬಿಟ್ಟರೆ ಗತಿಯೇನು ? :- ಕಾರ್ಯಾಗಾರವನ್ನು ನಡೆಸಿಕೊಟ್ಟ ಬೆಂಗಳೂರಿನ ಕ್ರಿಯೇಟ್ ಸಂಸ್ಥೆಯ ಮುಖ್ಯಸ್ಥರಾದ ವೈ.ಜಿ. ಮುರಳೀಧರನ್ ಅವರು ಮಾತನಾಡಿ, ಸರ್ಕಾರದಿಂದ ಮಂಜೂರಾದ ಹಣವೆಲ್ಲ ಅಭಿವೃದ್ಧಿ ಯೋಜನೆಗೆ ಬಳಕೆಯಾಗದೆ, ಭ್ರಷ್ಟಾಚಾರದಲ್ಲೇ ಕರಗಿ ಹೋದರೆ, ಅಭಿವೃದ್ಧಿ ಯೋಜನೆ ಹೇಗೆ ಸಾಧ್ಯ ಎಂಬುದನ್ನು ವಿದ್ಯಾರ್ಥಿಗಳೂ ಸೇರಿದಂತೆ ಎಲ್ಲ ನಾಗರಿಕರೂ ಚಿಂತನೆ ನಡೆಸಿ, ಮಾಹಿತಿ ಹಕ್ಕು ಕಾಯ್ದೆಯನ್ನು ಬಳಸಿಕೊಳ್ಳಬೇಕೆಂದು ಕರೆ ನೀಡಿದರು. ಅಮೆರಿಕ ಗಗನ ನೌಕೆ ಕೊಲಂಬಿಯಾ ದುರ್ಘಟನೆಯಲ್ಲಿ ಕಲ್ಪನಾ ಚಾವ್ಲಾ ಸೇರಿದಂತೆ ಹಲವರು ಮೃತಪಟ್ಟಾಗ, ಇಂಗ್ಲೆಂಡಿನ ಬಿ.ಬಿ.ಸಿ. ಸಂಸ್ಥೆಯು ಅಲ್ಲಿನ ಮಾಹಿತಿ ಕಾಯ್ದೆ ಬಳಸಿಕೊಂಡು ಅಮೆರಿಕಾದ ನಾಸಾ ಸಂಸ್ಥೆಯನ್ನು ಪ್ರಶ್ನಿಸುವ ಮೂಲಕ ಹಲವಾರು ಅಂಶಗಳನ್ನು ಬೆಳಕಿಗೆ ತಂದಪ್ರಸಂಗವನ್ನು ಉದಾಹರಿಸಿ, ಆಡಳಿತದ ಎಲ್ಲ ಹಂತದಲ್ಲಿ ಪಾರದರ್ಶಕತೆ, ನೈತಿಕತೆ, ಜವಾಬ್ದಾರಿ ಉಂಟು ಮಾಡಲು ಭಾವಿ ಪ್ರಜೆಗಳಾದ ವಿದ್ಯಾರ್ಥಿಗಳು ಈ ಹಕ್ಕನ್ನು ಚಲಾಯಿಸಲು ವಿನಂತಿಸಿದರು. ವಿದ್ಯಾಸಂಸ್ಥೆಯ ಕಾರ್ಯದರ್ಶಿ ಮರಿಚೆನ್ನಮ್ಮ ಅವರು ಅಧ್ಯಕ್ಷತೆ ವಹಿಸಿದ್ದರು. ಕಾನೂನು ಕಾಲೇಜಿನ ಪ್ರಾಚಾರ್ಯ ಎಸ್. ರಮೇಶ್, ವಿದ್ಯಾಸಂಸ್ಥೆಯ ನಿರ್ದೇಶಕಿ ವೀಣಾ, ಮತ್ತೋರ್ವ ಪ್ರಾಚಾರ್ಯ ನಾಗೇಶ್ ವೇದಿಕೆಯಲ್ಲಿದ್ದರು. ಟಿ.ಎಸ್.ಅನುಪಮ ಸ್ವಾಗತಿಸಿದರು. ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆಯ ವ್ಯವಸ್ಥಾಪಕ ಆರ್. ವಿಶ್ವನಾಥನ್ ವಂದಿಸಿ, ಮುರುಳಿ ಕಾರ್ಯಕ್ರಮ ನಿರೂಪಿಸಿದರು.