Dated 25-06-2007
ಮಾಹಿತಿ ಹಕ್ಕು ಕಾಯ್ದೆ: ಸುಗಮ ಬದುಕಿಗೆ ಸಹಕಾರಿ
ತುಮಕೂರು : ಮಾಹಿತಿ ಹಕ್ಕು ಕಾಯ್ದೆಯು ಆಡಳಿತದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ, ಉತ್ತರದಾಯಿತ್ವ ಮೂಡಿಸುವ ಮೂಲಕ ಜನಜೀವನ ಸುಗಮವಾಗಲು ಸಹಕಾರಿಯಾಗಿದೆ ಎಂದು ಬೆಂಗಳೂರಿನ ಗ್ರಾಹಕ ಹಕ್ಕು, ಶಿಕ್ಷಣ ಮತ್ತು ಜಾಗೃತಿ ಟ್ರಸ್ಟ್ ನ ಮುಖ್ಯಸ್ಥರಾದ ವೈ.ಜಿ.ಮುರಳೀಧರನ್ ಅವರು ವಿಶ್ಲೇಷಿಸಿದರು. ಅವರು ದಿನಾಂಕ ೨೫-೦೬-೨೦೦೭ ರಂದು ತುಮಕೂರು ನಗರದ ಗಾಯತ್ರಿ ಸಮುದಾಯ ಭವನದಲ್ಲಿ ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆ ಮತ್ತು ಎಲ್.ಐ.ಸಿ. ಪ್ರತಿನಿಧಿಗಳ ಸಂಘ (ತುಮಕೂರು ಶಾಖೆ ೧ ಮತ್ತು ಶಾಖೆ ೨) ಗಳ ಸಂಯುಕ್ತಾಶ್ರಯದಲ್ಲಿ ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ಏರ್ಪಟ್ಟಿದ್ದ ವಿಶೇಷ ತರಬೇತಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಈ ಕಾಯ್ದೆಯನ್ನು ಜನರು ತಮ್ಮ ವೈಯಕ್ತಿಕ ಸಮಸ್ಯೆಗಳ ನಿವಾರಣೆಗಾಗಿಯೂ ಬಳಸಿಕೊಳ್ಳಬಹುದು. ಜೊತೆಗೆ ಸಾಮಾಜಿಕ ಕಳಕಳಿ ಇದ್ದರೆ ಸಾರ್ವಜನಿಕ ಹಿತಾಸಕ್ತಿಯ ವಿಷಯಕ್ಕೂ ಧಾರಾಳವಾಗಿ ಉಪಯೋಗಿಸಿಕೊಳ್ಳಬಹುದು. ಜನಸಾಮಾನ್ಯರ ಪಾಲಿಗೆ ಇದೊಂದು ಪರಿಣಾಮಕಾರಿ ಅಸ್ತ್ರವಾಗಿದ್ದು, ಬಳಕೆ ಮಾಡಲು ಸ್ವಲ್ಪ ಧೈರ್ಯ ಇರಬೇಕಷ್ಟೇ ಎಂದು ಮಾರ್ಮಿಕವಾಗಿ ನುಡಿದರು. ಎಲ್ಲ ಕಾಯ್ದೆ, ಕಾನೂನುಗಳ ಬಳಕೆಯಲ್ಲೂ ಇನ್ನೊಂದು ಮುಖ ಇರುವಂತೆ, ಈ ಕಾಯ್ದೆಯ ಬಳಕೆಯಲ್ಲೂ ಬ್ಲಾಕ್ ಮೇಲ್ ತಂತ್ರ ಇದೆಯೆಂಬ ಆರೋಪಗಳು ಕೇಳಿಬರುತ್ತಿವೆ. ಜನಸಾಮಾನ್ಯರಿಗಿಂತಲೂ ಯೂನಿಯನ್ ಮುಖಂಡರು, ನಿವೃತ್ತರು, ವಿರೋಧಿಗಳು ವೈಯಕ್ತಿಕ ದ್ವೇಷದಿಂದ ಅರ್ಜಿ ಹಾಕುತ್ತಾರೆಂಬ ದೂರುಗಳೂ ಇವೆ. ಆದರೆ ಎಲ್ಲ ಅರ್ಜಿಗಳೂ, ಎಲ್ಲ ಪ್ರಶ್ನೆಗಳೂ ಹಾಗೆಯೇ ಇರುವುದಿಲ್ಲ. ಎಲ್ಲೋ ಕೆಲವೊಂದು ಪ್ರಕರಣಗಳು ಹಾಗಾಗಬಹುದು. ಅದೇನೇ ಇದ್ದರೂ ಜನರು ಮುಂದಿಟ್ಟ ಪ್ರಶ್ನೆಗಳಿಗೆ ಸಂಬಂಧಿಸಿದ ಇಲಾಖೆಯವರು ಉತ್ತರ್ ಕೊಡಲೇಬೇಕಾಗುತ್ತದೆ. ಇದು ಅನಿವಾರ್ಯ ಎಂದು ಉದಾಹರಣೆಗಳ ಸಹಿತ ವಿವರಿಸಿದ ಮುರಳೀಧರನ್ ಅವರು, ಇಂದು ಪ್ರಶ್ನೆ ಕೇಳುವ ಬಗ್ಗೆಯೂ ಜನಜಾಗೃತಿ ಮೂಡಿಸಬೇಕು. ಜನತೆಗೆ ಒಳಿತಾಗುವಂತಹ ಪ್ರಶ್ನೆಗಳನ್ನು ಕೇಳುವಂತಾಗಬೇಕು ಎಂದು ಆಶಿಸಿದರು. ಪ್ರತಿ ಇಲಾಖೆಯೂ ತನ್ನ ಕರ್ತವ್ಯ ವ್ಯಾಪ್ತಿಗೆ ಸಂಬಂಧಿಸಿದ ಕನಿಷ್ಟ ಮಾಹಿತಿಗಳನ್ನು ಸಿದ್ಧವಾಗಿಡುವುದು ಆದ್ಯ ಕರ್ತವ್ಯ ಆಗಿದೆ. ಪ್ರಶ್ನಿಸುವ ಪ್ರವೃತ್ತಿಯಿಂದ ಸಂಬಂಧಿಸಿದ ಇಲಾಖೆಗಳಲ್ಲಿ ಮಾಹಿತಿಯ ಉನ್ನತೀಕರಣ ಸಾಧ್ಯವಾಗುತ್ತದೆ. ಇದರಿಂದ ದಾಖಲಾತಿ ಪದ್ಧತಿ ಸಮರ್ಪಕಗೊಳ್ಳುತ್ತದೆ. ದಾಖಲಾತಿ ಪದ್ಧತಿ ಸರಿಯಿದ್ದರೆ ಮಾಹಿತಿ ಕೊಡುವುದು ಸುಲಭವಾಗುತ್ತದೆ ಎಂದು ಮುರಳೀಧರನ್ ಅವರು ಅಭಿಪ್ರಾಯಪಟ್ಟರು. ಕಾರ್ಯಾಗಾರವನ್ನು ಉದ್ಘಾಟಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಎಂ. ಗಿರಿಧರ್ ಅವರು ಮಾತನಾಡಿ, ಆಡಳಿತದಲ್ಲಿ ಪಾರದರ್ಶಕತೆ ಮೂಡಲು ಈ ಕಾಯ್ದೆಯು ಸಹಕಾರಿಯಾಗಿದೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಇಂತಹ ಕಾರ್ಯಾಗಾರದ ಅಗತ್ಯತೆ ಇದೆ ಎಂದರು. ಮುಖ್ಯ ಅತಿಥಿಗಳಾಗಿದ್ದ ನಗರಸಭೆ ಆಯುಕ್ತ ಅಬ್ದುಲ್ ಖಯ್ಯೂಂ ಅವರು ಮಾತನಾಡಿ, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ಮೂಡಲು ಮಾಹಿತಿ ಕಾಯ್ದೆಯು ಸಹಕಾರಿಯಾಗಿದೆ. ಈ ಪವಿತ್ರ ಅಸ್ತ್ರವನ್ನು ದ್ವೇಷಕ್ಕೆ ಬಳಸದೆ, ದುರಪಯೋಗ ಮಾಡಿಕೊಳ್ಳದೆ, ಸಾರ್ವಜನಿಕರ ಒಳಿತಿಗೆ ಬಳಸಬೇಕು ಎಂದು ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿದ್ದ ಮಾಜಿ ನಗರಸಭಾಧ್ಯಕ್ಷ ಹಾಗೂ ಗಾಯತ್ರಿ ಸಹಕಾರ ಸಂಘದ ಅಧ್ಯಕ್ಷ ಆರ್.ಎನ್.ಸತ್ಯನಾರಾಯಣ ಅವರು ಮಾತನಾಡಿ, ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದ ನಂತರ ಕಛೇರಿಗಳಲ್ಲಿ ಒಂದು ರೀತಿಯ ಜಾಗೃತಿ ಮೂಡುತ್ತಿದ್ದು, ತಪ್ಪುಗಳ ಪ್ರಮಾಣ ಕಡಿಮೆಯಾಗುತ್ತಿದೆ. ಈ ಕಾಯ್ದೆಯಡಿ ಬಂದ ಅರ್ಜಿಗಳಿಗೆ ಆದ್ಯತೆ ದೊರಕುತ್ತಿದೆ. ಜನರೂ ಸಹ ಯಾವುದೋ ತಪ್ಪುಗಳನ್ನೇ ಹುಡುಕದೆ, ತಮ್ಮ ವೈಯಕ್ತಿಕ ಸಮಸ್ಯೆ ನಿವಾರಣೆಗಾಗಿ ಅಥವಾ ಸಾರ್ವಜನಿಕ ಹಿತಕ್ಕಾಗಿ ಈ ಕಾಯ್ದೆಯನ್ನು ಬಳಸಬೇಕು ಎಂದು ನುಡಿದರು. ಸಿ.ಜೆ. ರಮ್ಯ ಪ್ರಾರ್ಥಿಸಿದರು. ಎಲ್.ಐ.ಸಿ. ಪ್ರತಿನಿಧಿಗಳ ಸಂಘದ ಅಧ್ಯಕ್ಷ ಭರತ್ ಕುಮಾರ್ ಜೈನ್ ಸ್ವಾಗತಿಸಿದರು. ಪತ್ರಕರ್ತ ಆರ್.ಎಸ್.ಅಯ್ಯರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಾಗಾರದ ಉದ್ದೇಶ ವಿವರಿಸಿದರು. ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆಯ ವ್ಯವಸ್ಥಾಪಕ ಆರ್.ವಿಶ್ವನಾಥನ್ ಕಾರ್ಯಕ್ರಮ ನಿರೂಪಿಸಿದರು. ಲಿಂಗಪ್ಪ ವಂದಿಸಿದರು. ಶಾಖೆ ೨ ರ ಅಧ್ಯಕ್ಷ ಜ್ಯೋತಿಪ್ರಕಾಶ್ ವೇದಿಕೆಯಲ್ಲಿದ್ದರು. ಕಾರ್ಯಾಗಾರದಲ್ಲಿ ಸರ್ಕಾರಿ ಅಧಿಕಾರಿಗಳು, ಮಾಜಿ ನಗರಸಭಾ ಸದಸ್ಯರು, ಮಹಿಳೆಯರು, ವಕೀಲರು, ವಿದ್ಯಾರ್ಥಿಗಳು, ಉದ್ಯಮಿಗಳು ಸೇರಿದಂತೆ ಜಿಲ್ಲಾದ್ಯಂತದಿಂದ ನೂರಕ್ಕೂ ಅಧಿಕ ನಾಗರಿಕರು ಪಾಲ್ಗೊಂಡಿದ್ದರು.
ಜನ ಜಾಗೃತರಾಗದಿದ್ದರೆ ಮಾಹಿತಿ ಕಾಯ್ದೆಯೂ ಕಣ್ಮರೆ ಸಂಭವ
ತುಮಕೂರು: “ಜನತೆಯ ಒತ್ತಡದಿಂದ, ಜನತೆಗಾಗಿ ಜಾರಿಗೆ ಬಂದಿರುವ ಮಾಹಿತಿ ಹಕ್ಕು ಕಾಯ್ದೆಯ ಶಕ್ತಿಯನ್ನು ಕುಂದಿಸಲು ಹಲವು ಪ್ರಯತ್ನಗಳು ನಡೆದಿವೆ. ವಿವಿಧ ಕ್ಷೇತ್ರಗಳು ಈ ಕಾಯ್ದೆಯಿಂದ ತಮಗೆ ವಿನಾಯಿತಿ ನೀಡುವಂತೆ ಒತ್ತಡ ಹೇರುತ್ತಿವೆ. ಆ ಮೂಲಕ ಈ ಕಾಯ್ದೆಯ ಅದ್ಭುತವಾದ ಶಕ್ತಿಯನ್ನು ಕುಂದಿಸುವ ಯತ್ನ ನಡೆದಿದೆ ಎಂದು ಆತಂಕದಿಂದ ನುಡಿದ ಬೆಂಗಳೂರಿನ ‘ಕ್ರಿಯೇಟ್ (ಗ್ರಾಹಕ ಹಕ್ಕು, ಶಿಕ್ಷಣ ಮತ್ತು ಜಾಗೃತಿ ಟ್ರಸ್ಟ್) ನ ಮುಖ್ಯಸ್ಥರಾದ ವೈ.ಜಿ.ಮುರಳೀಧರನ್ ಅವರು, “ಜನತೆ ಜಾಗೃತರಾಗಿ ಈ ಕಾಯ್ದೆಯ ಉಳಿವಿಗಾಗಿ ಒತ್ತಡ ತರಬೇಕು ಹಾಗೂ ಯಥೇಚ್ಛವಾಗಿ ಈ ಕಾಯ್ದೆಯನ್ನು ನಿರ್ಭೀತಿಯಿಂದ ಬಳಸಲು ಮುಂದಾಗಬೇಕು ಎಂದು ಕರೆ ನೀಡಿದರು. ಅವರು ದಿನಾಂಕ ೨೫-೦೬-೨೦೦೭ ರಂದು ತುಮಕೂರು ನಗರದ ಗಾಯತ್ರಿ ಸಮುದಾಯ ಭವನದಲ್ಲಿ ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆ ಮತ್ತು ಎಲ್.ಐ.ಸಿ. ಪ್ರತಿನಿಧಿಗಳ ಸಂಘ (ತುಮಕೂರು ಶಾಖೆ ೧ ಮತ್ತು ಶಾಖೆ ೨) ಗಳ ಸಂಯುಕ್ತಾಶ್ರಯದಲ್ಲಿ “ ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ಏರ್ಪಟ್ಟಿದ್ದ ವಿಶೇಷ ತರಬೇತಿ ಕಾರ್ಯಾಗಾರದಲ್ಲಿ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು. “ಅನೇಕ ಸಂದರ್ಭಗಳಲ್ಲಿ ಪ್ರಶ್ನೆ ಕೇಳಿದರೆ ಏನಾಗಿಬಿಡುವುದೋ ? ಯಾರೇನು ತಿಳಿದುಕೊಂಡು ಬಿಡುವರೋ ? ಎಂಬ ಅಳುಕು ಉಂಟಾಗಬಹುದು. ಆದರೆ ಈ ವಿಷಯದಲ್ಲಿ ಮೈ ಚಳಿ ಬಿಡಬೇಕಾಗುತ್ತದೆ. ವೈಯಕ್ತಿಕ ವಿಚಾರಗಳ ಜೊತೆಗೆ ಸಾಮಾಜಿಕ ಕಳಕಳಿಯಿಂದ ಪ್ರಶ್ನೆ ಕೇಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಇದರಿಂದ ಆಡಳಿತದಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ ಮೂಡುವುದು. ಆಡಳಿತದಲ್ಲಿ ದಾಖಲಾತಿ ವ್ಯವಸ್ಥೆ ಸಮರ್ಪಕಗೊಳ್ಳುವುದು. ಇನ್ನೂ ಹೆಚ್ಚಿನ ಆಸಕ್ತಿಯಿದ್ದರೆ ಒಂದು ವಿಷಯದ ಜಾಡು ಹಿಡಿದು ಆಮೂಲಾಗ್ರವಾಗಿ ಪ್ರಶ್ನಿಸುತ್ತ ಹೋಗಬಹುದು ಎಂದು ಹೇಳಿದರು. ಈ ಕಾಯ್ದೆಯ ಪ್ರಕಾರ ಜನಸಾಮಾನ್ಯ ಮತ್ತು ಜನಪ್ರತಿನಿಧಿಗಳು ಮಾಹಿತಿ ದೃಷ್ಟಿಯಲ್ಲಿ ಸಮಾನರಾಗುತ್ತಾರೆ. ಇದು ಈ ದೇಶದ ಶ್ರೀ ಸಾಮಾನ್ಯನಿಗೆ ಲಭಿಸಿರುವ ಬಹುದೊಡ್ಡ ಅಸ್ತ್ರವಾಗಿದೆ. ಯಾರ ಸಹಾಯವೂ ಇಲ್ಲದೆಯೂ ಓರ್ವ ವ್ಯಕ್ತಿ ತನಗೆ ಬೇಕಾದ ಮಾಹಿತಿಯನ್ನು ಪಡೆಯಬಹುದಾದ ಅತಿ ಸರಳ ಕಾಯ್ದೆ ಇದಾಗಿದೆ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳೂ ಮಾಹಿತಿ ಕಾಯ್ದೆಯನ್ನು ಸಮರ್ಥವಾಗಿ ಬಳಸಿಕೊಳ್ಳಬಹುದು ಎಂದು ಅನೇಕ ಉದಾಹರಣೆಗಳೊಂದಿಗೆ ಮುರಳೀಧರನ್ ಅವರು ವಿವರಿಸಿದರು. ೨೦೦೫ ರ ಅಕ್ಟೋಬರ್ ೧೨ ರಂದು ಮಾಹಿತಿ ಹಕ್ಕು ಕಾಯ್ದೆಯು ಪೂರ್ಣ ರೂಪದಲ್ಲಿ ಜಾರಿಗೆ ಬಂದಿತು. ಆ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಬಂದ ಆರು ದಶಕಗಳ ನಂತರ ನಾಗರಿಕರಿಗೆ “ ಮಾಹಿತಿ ಸ್ವಾತಂತ್ರ್ಯ ಲಭಿಸಿತು. ಈ ಕಾಯ್ದೆಯಿಂದಾಗಿ ಇಂದು ಸರ್ಕಾರಿ ದಾಖಲೆಗಳಾವುದೂ ಗೌಪ್ಯವಲ್ಲ.ಈ ಕಾಯ್ದೆಯಲ್ಲಿ ನಿಗದಿಪಡಿಸಿದ ಕೆಲವು ವಿಷಯಗಳನ್ನು ಬಿಟ್ಟು ಮಿಕ್ಕೆಲ್ಲ ದಾಖಲಾತಿಗಳೂ ಈಗ ಸರ್ಕಾರದ ಅಥವಾ ಸರ್ಕಾರಿ ನೌಕರರ ಸ್ವತ್ತಲ್ಲ. ಅವೆಲ್ಲವೂ ಈಗ ಸಾರ್ವಜನಿಕರ ಸ್ವತ್ತು ಎಂದು ಹೇಳಿದ ಅವರು, ಪೊಲೀಸ್ ಇಲಾಖೆಗೆ ಈ ಕಾಯ್ದೆಯಿಂದ ವಿನಾಯಿತಿಯೇನೂ ಇಲ್ಲ ಎಂದು ನಿದರ್ಶನಗಳ ಮೂಲಕ ಸ್ಪಷ್ಟಪಡಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಛೇರಿಗಳು, ಸರ್ಕಾರಿ ಶಾಲಾ-ಕಾಲೇಜುಗಳು, ಅನುದಾನಿತ ಶಾಲಾ-ಕಾಲೇಜುಗಳು, ಒಂದು ವೇಳೆ ಸರ್ಕಾರದ ಅನುದಾನ ಪಡೆಯದಿದ್ದರೂ ಸರ್ಕಾರದ ನಿಯಮಾವಳಿಗೊಳಪಟ್ಟ ಶಿಕ್ಷಣ ಸಂಸ್ಥೆಗಳು, ಸಹಕಾರಿ ಸಂಸ್ಥೆಗಳು, ಸ್ಟಾಕ್ ಎಕ್ಸ್‌ಚೇಂಜ್, ವಿಮಾ ಕಂಪನಿಗಳು, ಬ್ಯಾಂಕ್‌ಗಳು ಹೀಗೆ ಎಲ್ಲವೂ ಈ ಕಾಯ್ದೆಯ ವ್ಯಾಪ್ತಿಗೆ ಒಳಪಡುತ್ತವೆ. ಯಾವುದೇ ಕಛೇರಿಯಲ್ಲಿ ಫೈಲ್‌ಗಳನ್ನು ಉಚಿತವಾಗಿ ಪರಿಶೀಲಿಸುವ ಅಧಿಕಾರ, ರಸ್ತೆ ಕಾಮಗಾರಿ ಸೇರಿದಂತೆ ಬೇರೆ ಯಾವುದೇ ಸರ್ಕಾರಿ ನಿರ್ಮಾಣ ಕಾಮಗಾರಿಗಳನ್ನು ಪರೀಕ್ಷಿಸುವ , ಸ್ಯಾಂಪಲ್ ಪಡೆಯುವ ಅಧಿಕಾರ ಈ ಕಾಯ್ದೆಯ ಪ್ರಕಾರ ಶ್ರೀ ಸಾಮಾನ್ಯನಿಗಿದೆ. ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಸಭೆಗಳಿಗೆ, ಅಷ್ಟೇಕೆ ಜಿಲ್ಲಾಧಿಕಾರಿ ಕಛೇರಿಗಳಲ್ಲಿ ಇಬ್ಬರು ಅಧಿಕಾರಿಗಳಿಗಿಂತ ಹೆಚ್ಚು ಅಧಿಕಾರಿಗಳು ಸೇರಿ ನಡೆಸುವ ಸಭೆಗೂ ನಾಗರಿಕರು ಪ್ರೇಕ್ಷಕರಾಗಿ ಕುಳಿತುಕೊಳ್ಳಲು ಅವಕಾಶವಿದೆ ಎಂದ ವೈ.ಜಿ.ಮುರಳೀಧರನ್ ಅವರು ಈ ಕಾಯ್ದೆಯ ವಿವಿಧ ಸ್ವರೂಪಗಳನ್ನು ಕೂಲಂಕಷವಾಗಿ ವಿವರಿಸಿದರು.