Tuesday, July 28, 2009

Friday, July 10, 2009


Date: 15-06-2009
‘ಬರಹದ ರೂವಾರಿಗೆ ನಗರದಲ್ಲಿ ಆತ್ಮೀಯ ಸನ್ಮಾನ
ಕನ್ನಡದಲ್ಲಿ ಅನ್ವಯಿಕ ತಂತ್ರಾಂಶ ಅಗತ್ಯ- ಶೇಷಾದ್ರಿವಾಸು
ತುಮಕೂರು:- ಕನ್ನಡ ಭಾಷಾ ತಂತ್ರಾಂಶ (ಸಾಫ್ಟ್‌ವೇರ್)ಗಳಲ್ಲಿ ಬಹುತೇಕ ತಾಂತ್ರಿಕ ಸಮಸ್ಯೆಗಳು ಬಗೆಹರಿದಿವೆ. ಆದರೆ ಇಂಗ್ಲಿಷ್ ಭಾಷಾ ತಂತ್ರಾಂಶಗಳಲ್ಲಿರುವಂತೆ ಕನ್ನಡದಲ್ಲೂ ವಿವಿಧ ರೀತಿಯ ಅನ್ವಯಿಕ ತಂತ್ರಾಂಶ (ಅಪ್ಲಿಕೇಷನ್ಸ್) ಗಳನ್ನು ರೂಪಿಸಬೇಕಾದ ಅಗತ್ಯತೆ ಇದೆ ಎಂದು ಉಚಿತ ಕನ್ನಡ ತಂತ್ರಾಂಶ ‘ಬರಹದ ರೂವಾರಿಯಾದ ಅಮೇರಿಕಾದ ಶೇಷಾದ್ರಿವಾಸು ಚಂದ್ರಶೇಖರನ್ ಅವರು ಅಭಿಪ್ರಾಯಪಟ್ಟರು.
ಅವರು ಜೂನ್ ೧೫ ರಂದು ಸೋಮವಾರ ಬೆಳಿಗ್ಗೆ ತುಮಕೂರು ನಗರದ ಸಿಟ್ರಿಸ್ ವಿದ್ಯಾಸಂಸ್ಥೆಯಲ್ಲಿ ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆ ಮತ್ತು ಕನ್ನಡ ಸಾಹಿತ್ಯ ಡಾಟ್ ಕಾಮ್ ಬೆಂಬಲಿಗರ ಬಳಗದ ಸಂಯುಕ್ತಾಶ್ರಯದಲ್ಲಿ ನಡೆದ ಸಮಾರಂಭದಲ್ಲಿ ತಮಗೆ ನೀಡಿದ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡುತ್ತಿದ್ದರು. ಕನ್ನಡದಲ್ಲಿ ಇಂದು ತಂತ್ರಾಂಶಗಳು ಲಭ್ಯವಿವೆ. ಅವೆಲ್ಲವೂ ಇ-ಮೇಲ್ ಮಾಡಲು, ದಾಖಲಾತಿ ಸಂಗ್ರಹ ಇತ್ಯಾದಿಗಷ್ಟೇ ಸೀಮಿತವಾಗಿವೆ. ಆದರೆ ಅಷ್ಟೇ ಸಾಲದು. ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಎಲ್ಲ ಮಾಹಿತಿಯೂ ಕನ್ನಡದಲ್ಲೇ ಲಭ್ಯವಾಗುವಂತಾಗಬೇಕು. ಅದಕ್ಕಾಗಿ ಅನ್ವಯಿಕ ತಂತ್ರಾಂಶಗಳು ರೂಪುಗೊಳ್ಳಬೇಕು ಎಂದು ಅವರು ಹೇಳಿದರು.
೧೨ ಭಾಷೆಗಳಲ್ಲಿ ಬಳಕೆ:- ‘ಬರಹ ತಂತ್ರಾಂಶವು ಇಂದು ಕನ್ನಡ, ದೇವನಾಗರಿ ಸೇರಿದಂತೆ ಒಂಭತ್ತು ಭಾರತೀಯ ಲಿಪಿಗಳಲ್ಲಿ ಲಭ್ಯವಿದ್ದು, ಹನ್ನೆರಡು ಭಾರತೀಯ ಭಾಷೆಗಳಲ್ಲಿ ಬಳಕೆಯಲ್ಲಿದೆ. ಇದರಿಂದ ಒಂದು ಭಾಷೆಯಿಂದ ಮತ್ತೊಂದು ಭಾಷೆಯ ಲಿಪ್ಯಂತರಕ್ಕೆ ಸಹಾಯಕವಾಗಿದೆ. ಅಲ್ಲದೆ ಅನೇಕ ಸುಧಾರಣೆಗಳ ಮೂಲಕ ಇಂದು ‘ಬರಹ-೮ ತಂತ್ರಾಂಶ ಸಿದ್ಧವಾಗಿದೆ. ಬರಹದಿಂದ ಬ್ರೈಲ್ ಲಿಪಿಗೂ ಪರಿವರ್ತನೆ ಮಾಡಬಹುದಾಗಿದೆ. ಪ್ರೊ ಜಿ.ವೆಂಕಟಸುಬ್ಬಯ್ಯ ಅವರ ಕನ್ನಡ ನಿಘಂಟನ್ನು ಅಳವಡಿಸಲಾಗಿದೆ. ಸದ್ಯದಲ್ಲೇ ಶಂಕರ ಭಟ್ ಅವರು ರೂಪಿಸಿರುವ ಪರ್ಯಾಯ ಕನ್ನಡ ಪದಗಳ ಸಂಗ್ರಹವನ್ನೂ ಸೇರಿಸುವ ಉದ್ದೇಶವಿದೆ ಎಂದು ಶೇಷಾದ್ರಿವಾಸು ಹೇಳಿದರು. ಲಾಭಕ್ಕಲ್ಲ, ಖುಷಿಗೆ:- ಅಮೇರಿಕದಂತಹ ದೇಶದಲ್ಲಿ ಕುಳಿತು ‘ಬರಹ ತಂತ್ರಾಂಶವನ್ನು ತಾವು ಸೃಷ್ಟಿಸಿದ್ದು ಯಾವುದೇ ಲಾಭದ ಉದ್ದೇಶದಿಂದಲ್ಲ. ಕೇವಲ ಸ್ವಂತ ಬಳಕೆಯ ಖುಷಿಯಿಂದ ಎಂದು ಹೇಳಿದ ಅವರು, ಬರಹ ರೂಪುಗೊಂಡಾಗ ಖುಷಿಯಾಯಿತು. ಅದು ಹಲವರ ಗಮನಕ್ಕೆ ಬಂದಾಗ ಅನೇಕ ಗೆಳೆಯರು ಸಿಕ್ಕಿದರು. ಅಲ್ಲದೆ ಬಿಡುವಿನ ವೇಳೆಯನ್ನು ಸದ್ವಿನಿಯೋಗಪಡಿಸಿಕೊಳ್ಳಲು ಬರಹ ತಂತ್ರಾಂಶದ ಸಂಶೋಧನೆ ನೆರವಾಯಿತು. ಅದೇ ಬಹುದೊಡ್ಡ ಖುಷಿಯ ಸಂಗತಿ ಎಂದರು. ಜೀವನೋಪಾಯಕ್ಕೆ ಒಂದು ಉದ್ಯೋಗವಿದೆ. ಅಷ್ಟು ಸಾಕು. ಆದರೆ ಹವ್ಯಾಸವಾಗಿ ನಡೆಸಿದ ಪ್ರಯೋಗವು ‘ಬರಹ ತಂತ್ರಾಂಶದ ರೂಪ ಪಡೆಯಿತು. ಆ ಪ್ರಯೋಗ ಯಶಸ್ವಿಯಾದ್ದರಿಂದ ಅದನ್ನು ಉಚಿತವಾಗಿ ಜನಬಳಕೆಗೆ ಇಂಟರ್‌ನೆಟ್‌ನಲ್ಲಿ ಮುಕ್ತ ಅವಕಾಶ ನೀಡಲಾಯಿತು. ಇಂದು ಪ್ರತಿ ತಿಂಗಳೂ ಸುಮಾರು ೨೦ ಸಾವಿರ ಜನರು ‘ಬರಹ ತಂತ್ರಾಂಶವನ್ನು ಡೌನ್ ಲೋಡ್ ಮಾಡಿಕೊಳ್ಳುತ್ತಿದ್ದು, ಈವರೆಗೆ ಲಕ್ಷಾಂತರ ಜನರು ಇದರ ಉಪಯೋಗ ಪಡೆಯುತ್ತಿದ್ದಾರೆ. ಅನೇಕರು ಸ್ವಯಂಪ್ರೇರಣೆಯಿಂದ ಧನಸಹಾಯಕ್ಕೆ ಮುಂದೆ ಬಂದಾಗ, ಆಸಕ್ತಿಯಿರುವವರು ಬೆಂಗಳೂರಿನಲ್ಲಿ ಕನ್ನಡ ಕೆಲಸಕ್ಕೆ ಬದ್ಧವಾಗಿರುವ ಅ.ನ.ಕೃ. ಪ್ರತಿಷ್ಠಾನಕ್ಕೆ ನೆರವು ನೀಡಬಹುದೆಂದು ಮಾತ್ರ ಮನವಿ ಮಾಡಲಾಗಿದೆ ಎಂದು ಹೇಳಿದರು.
ಗೌರವ ಡಾಕ್ಟರೇಟ್ ಕೊಡಲಿ: ದೂರದ ಅಮೇರಿಕದಲ್ಲಿ ಕುಳಿತು ಮೌನವಾಗಿ ಹಾಗೂ ನಿಸ್ವಾರ್ಥತೆಯಿಂದ ಕನ್ನಡವನ್ನು ಉಳಿಸಿ-ಬೆಳೆಸುವ ಕೆಲಸ ಮಾಡಿರುವ, ತುಮಕೂರಿನೊಂದಿಗೆ ನಿಕಟ ಸಂಪರ್ಕವಿರುವ ಶೇಷಾದ್ರಿವಾಸು ಅವರಿಗೆ ತುಮಕೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಬೇಕಾಗಿದೆ ಎಂದು ಖ್ಯಾತ ಪರಿಸರವಾದಿ ಟಿ.ವಿ.ಎನ್. ಮೂರ್ತಿ ಅವರು ಅಭಿಪ್ರಾಯಪಟ್ಟರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಿ.ಐ.ಟಿ. ವಿದ್ಯಾಸಂಸ್ಥೆಯ ಕಾರ್ಯದರ್ಶಿ ಜಿ.ಬಿ.ಜ್ಯೋತಿಗಣೇಶ್ ಅವರು ಇದೇ ಸಂದರ್ಭದಲ್ಲಿ ಶೇಷಾದ್ರಿವಾಸು ಅವರಿಗೆ ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು. ವಿಪ್ರ ಜಾಗೃತಿ ವೇದಿಕೆ ಅಧ್ಯಕ್ಷ ಜಿ.ಕೆ. ಶ್ರೀನಿವಾಸ್ ವೇದಿಕೆ ಪರವಾಗಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಸರಸ್ ವ್ಯವಸ್ಥಾಪಕ ಆರ್.ವಿಶ್ವನಾಥನ್ ವೇದಿಕೆಯಲ್ಲಿದ್ದರು. ಕೋಟೆ ನಾಗಭೂಷಣ್ ಸ್ವಾಗತಿಸಿ, ವಂದಿಸಿದರು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವಿ.ಎಸ್.ರಾಮಚಂದ್ರನ್, ಡಿ.ಡಿ.ಪಿ.ಐ. ಪ್ರಭಾಕರ್, ಮಾಜಿ ನಗರ ಸಭಾಧ್ಯಕ್ಷ ಆರ್.ಎನ್.ಸತ್ಯನಾರಾಯಣ, ಕೈಗರಿಕೋದ್ಯಮಿ ಮಾಲತಿ ಸತ್ಯನಾರಾಯಣ, ಮಾಜಿ ನಗರ ಸಭಾ ಸದಸ್ಯರಾದ ಪಿ.ಎಸ್. ರಮೇಶ್, ಡಿ.ಆರ್. ಬಸವರಾಜು, ಪ್ರೊ ಕರುಣಾಕರ್, ಪ್ರೊ ಎನ್.ಪಿ.ರವೀಂದ್ರನಾಥ್, ಡಾ ನಾಗಭೂಷಣ್, ಇಂಜಿನಿಯರ್ ರಾಮಶೇಷು, ಆಡಿಟರ್ ಪ್ರಕಾಶ್, ಪತ್ರಕರ್ತ ಆರ್.ಎಸ್.ಅಯ್ಯರ್, ಕೆ.ದೊರೈರಾಜ್ ಸೇರಿದಂತೆ ನಗರದ ಹಲವು ಗಣ್ಯರು ಭಾಗವಹಿಸಿದ್ದರು.